ಹೈದರಾಬಾದ್ ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂಬರುವ ವಿಧಾನಸಭೇ ಮತ್ತು 2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಕುರಿತು ಕಾಂಗ್ರೆಸ್ ಪಕ್ಷದ ವರಿಷ್ಟರು ಎರಡನೇ ಸುತ್ತಿನ ಸಮಾಲೋಚನೆ ನಡೆಸಿದ್ದಾರೆ.
ಚುನಾವಣೆಯಲ್ಲಿ ಎದುರಾಳಿಗಳನ್ನು ಎದುರಿಸಲು ಮತ್ತು ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಏಕತೆ ಮತ್ತು ಶಿಸ್ತು ಕಾಯ್ದುಕೊಳ್ಳಲು ಪಕ್ಷದ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಒತ್ತು ನೀಡಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಸಭೆಯ ಎರಡನೇ ದಿನದ ತಮ್ಮ ಭಾಷಣದಲ್ಲಿ ಖರ್ಗೆ ಅವರು ಪಕ್ಷದ ಯಶಸ್ಸನ್ನು ಕಚಿತಪಡಿಸಿಕೊಳ್ಳಲು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ದೇಶದಲ್ಲಿ ಪರ್ಯಾಯ ಸರ್ಕಾರವನ್ನು ರಚಿಸಲು ಶ್ರಮಿಸುವಂತೆ ಪಕ್ಷದ ನಾಯಕರನ್ನು ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.
2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಹಾಗೂ ಮುಂಬರುವ ಐದು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಗುರಿಯೊಂದಿಗೆ ಕೆಲಸ ಮಾಡುವಂತೆ ಸಿಡಬ್ಲ್ಯೂಸಿ ಸದಸ್ಯರು, ರಾಜ್ಯ ಘಟಕದ ಅಧ್ಯಕ್ಷರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಿಗೆ ಖರ್ಗೆ ಸೂಚಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರವು ಮೂಲಭುತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದು ನಮಗೆ ವಿಶ್ರಾಂತಿ ನೀಡುವ ಸಮಯವಲ್ಲ. ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಒಗ್ಗೂಡಿ ಈ ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ಅಧ್ಯಕ್ಷರು ನಾಯಕರಿಗೆ ಹೇಳಿದ್ದಾರೆ.
ಜನರು ಪರ್ಯಾಯವನ್ನು ಹುಡುಕುತ್ತಿದ್ದಾರೆ ಮತ್ತು ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಚುನಾವಣೆಗಳಲ್ಲಿ ಕಾಂಗ್ರೆಸ್ನ ಗೆಲುವು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.