Thursday, January 29, 2026
Google search engine
Homeಮುಖಪುಟತುಮಕೂರು ಗ್ರಾಮಾಂತರ - ಕಾಂಗ್ರೆಸ್ ನತ್ತಾ ಮುಖ ಮಾಡಿದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್

ತುಮಕೂರು ಗ್ರಾಮಾಂತರ – ಕಾಂಗ್ರೆಸ್ ನತ್ತಾ ಮುಖ ಮಾಡಿದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್

ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ. ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ಎರಡು ಮೂರು ದಿನಗಳ ಹಿಂದೆ ಗೌರಿಶಂಕರ್ ಅವರನ್ನು ಭೇಟಿಯಾಗಿರುವುದು ಇದಕ್ಕೆ ಪುಷ್ಠಿ ನೀಡಿದಂತಾಗಿದೆ.

ತುಮಕೂರು ತಾಲ್ಲೂಕು ಬಳ್ಳಗೆರೆಯಲ್ಲಿ ಚಂದ್ರಶೇಖರ ಗೌಡ ಮತ್ತು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇದರ ಭಾಗವಾಗಿ ಸೆಪ್ಟೆಂಬರ್ 16ರಂದು ಅಂದರೆ ಶನಿವಾರ ತಮ್ಮ ಹುಟ್ಟು ಹಬ್ಬದ ದಿನದಂದು ಗೌರಿಶಂಕರ್ ತಮ್ಮ ಅಭಿಮಾನಿಗಳು, ಆಪ್ತರಿಗೆ ಶುಭ ಸುದ್ದಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸುದ್ದಿ ಹರಿದಾಡುತ್ತಿದೆ. ಇದು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿಯ ಮೇಲೆ ತೀವ್ರ ಪರಿಣಾಮ ಬೀರಲಿದೆ. ಬಿಜೆಪಿಯ ಹಾಲಿ ಶಾಸಕ ಬಿ.ಸುರೇಶ್ ಗೌಡ ಮತ್ತು ಜೆಡಿಎಸ್ ಮಾಜಿ ಶಾಸಕ ಗೌರಿಶಂಕರ್ ಹಾವು ಮುಂಗುಸಿಯಂತಿದ್ದಾರೆ. ಇದರಿಂದಾಗಿ ಗೌರಿಶಂಕರ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೌರಿಶಂಕರ್ ಜೆಡಿಎಸ್ ನಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಬಹಳ ಹಿಂದಿನಿಂದಲೂ ಗೌರಿಶಂಕರ್ ಮತ್ತು ಸುರೇಶ್ ಗೌಡ ನಡುವೆ ವಾಕ್ಸಮರ ಮುಂದುವರಿದಿದೆ. ಮಾತಿಗೆ ಮಾತು, ಏಟಿಗೆ ಏಟು ಎನ್ನುವಂತೆ ಉಭಯ ಮುಖಂಡರ ನಡುವೆ ಸಮರ ನಡೆಯುತ್ತಲೇ ಇದೆ. ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಗೌರಿಶಂಕರ್ ಶಾಸಕ ಬಿ.ಸುರೇಶ್ ಗೌಡ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಇದರ ನಡುವೆಯೇ ಬಿಜೆಪಿ ಜೊತೆ ಮೈತ್ರಿ ಎನ್ನುವುದು ಗೌರಿಶಂಕರ್ ಗೆ ಆಘಾತ ಉಂಟು ಮಾಡಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ಗೌಡ ವಿರುದ್ಧ ಗೌರಿಶಂಕರ್ ಅತ್ಯಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದರು. ಈಗ ಜೆಡಿಎಸ್ ವರಿಷ್ಟರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ತಮಗೆ ಪಕ್ಷದಲ್ಲಿ ಉಳಿಗಾಲವಿಲ್ಲದಂತೆ ಆಗುತ್ತದೆ ಎಂಬ ಕಾರಣವನ್ನು ಮುಂದೊಡ್ಡಿ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಿದ್ದತೆ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಸೇರ್ಪಡೆಯಾಗುವ ಸಂಬಂಧ ತಮ್ಮ ಆಪ್ತರು, ಅಭಿಮಾನಿಗಳು ಮತ್ತು ಕಾರ್ಯಕರ್ತರ ಜೊತೆ ನಿರಂತರ ಚರ್ಚೆ ನಡೆಸುತ್ತಿದ್ದಾರೆ, ಬಳ್ಳಗೆರೆಯ ತಮ್ಮ ನಿವಾಸದಲ್ಲಿ ಮೂರ್ನಾಲ್ಕು ದಿನಗಳಿಂದ ಬೀಡುಬಿಟ್ಟಿರುವ ಗೌರಿಶಂಕರ್ ಮುಂದಿನ ಆಗುಹೋಗುಗಳ ಬಗ್ಗೆ ಆಪ್ತರ ಬಳಿ ಮಾತುಕತೆ ನಡೆಸುತ್ತಿದ್ದು, ಆಪ್ತರು ಕೂಡ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ.

ಸೆಪ್ಟೆಂಬರ್ 16ರಂದು ಅಂದರೆ ಶನಿವಾರ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಗೌರಿಶಂಕರ್ ಇದೇ ಕಾರ್ಯಕ್ರಮದಲ್ಲಿ ತಮ್ಮ ಆಪ್ತರು ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಶುಭ ಸಂದೇಶ ನೀಡಲಿದ್ದಾರೆ ಎಂಬ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಹೀಗಾಗಿ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಗುಟ್ಟಾಗಿ ಉಳಿದಿಲ್ಲ. ಕ್ಷೇತ್ರಾದ್ಯಂತ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಯಾಗುವ ಮಾತುಗಳೇ ಕೇಳಿ ಬರುತ್ತಿವೆ

ಇನ್ನು ಗೌರಿಶಂಕರ್ ಸೆಪ್ಟೆಂಬರ್ 21ರಂದು ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮವಿದ್ದು, ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಮುಖಂಡರು ಗೌರಿಶಂಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಗೌರಿಶಂಕರ್ ಕಾಂಗ್ರೆಸ್ ಸೇರುತ್ತಾರೆ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular