ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಮತ್ತು ಅಲೆಮಾರಿ ಪಟ್ಟಿಗೆ ಸೇರಿಸಬೇಕು ಮತ್ತು ಅಲೆಮಾರಿ ಬುಡಕಟ್ಟುಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಕೊಡಬೇಕು ಎಂದು ನಟ ಚೇತನ್ ಒತ್ತಾಯಿಸಿದರು.
ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಡುಗೊಲ್ಲರು ಸೇರಿದಂತೆ ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಳೆದ ಏಳು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಈ ಸಮುದಾಯಗಳು ಅಸ್ಪೃಶ್ಯರಾಗಿಲ್ಲದೇ ಇದ್ದರೂ ಯಾರ ಕಣ್ಣಿಗೆ ಬೀಳದಂತೆ ಜೀವನ ನಡೆಸುತ್ತಿದ್ದಾರೆ ಎಂದರು.
ಬುಡ್ಗ ಜಂಗಮ, ಸುಡುಗಾಡು ಸಿದ್ದರು, ಕೊರಮ, ಕೊರಚ, ಹಕ್ಕಿಪಿಕ್ಕಿ ಹಾಗೂ ಕಾಡುಗೊಲ್ಲ ಸಮುದಾಯಗಳು ವಿಶಿಷ್ಟ ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಸಮುದಾಯಗಳಿಗೆ ವಿಶೇಷ ಪರಂಪರೆ ಇದೆ. ವಿಶೇಷ ಭಾಷೆ ಇದೆ. ವಿಶೇಷ ಸಂಸ್ಕೃತಿ ಇದೆ. ಇಂತಹ ಸಮುದಾಯಗಳಿಗೆ ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸಿದರು.
ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ, ಕುಣಿಗಲ್ಲು ಮತ್ತು ಪಾವಗಡ ಸೇರಿದಂತೆ ಬೇರೆಬೇರೆ ಕಡೆಗಳಲ್ಲಿ ಕಾಡುಗೊಲ್ಲ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಸಮುದಾಯಗಳ ಪರ ಹೋರಾಟ ಮಾಡಿ ಪ್ರತ್ಯೇಕ ಅಸ್ಮಿತೆಯನ್ನು ತಂದುಕೊಟ್ಟಿದ್ದೇವೆ ಎಂದು ತಿಳಿಸಿದರು.
ಕಾಡುಗೊಲ್ಲ ಸಮುದಾಯ ಒಂದು ಬುಡಕಟ್ಟು ಸಮುದಾಯ, ಬುಡಕಟ್ಟು ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಇವರನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕು ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು.
ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿಯ ಮುಖಂಡ ಕೆ.ಜಿ.ನಾಗಣ್ಣ ಮಾತನಾಡಿ, ಕಾಡುಗೊಲ್ಲ ಸಮುದಾಯ ಸಾಮಾಜಿಕ ಪ್ರತ್ಯೇಕತೆಯನ್ನು ಬಯಸಿ ನಾಗರಿಕ ಪ್ರಪಂಚದಿಂದ ದೂರ ಇದೆ. ಹೀಗಾಗಿ ಕಾಡುಗೊಲ್ಲರನ್ನು ಅಲೆಮಾರಿ ಪಟ್ಟಿಗೆ ಸೇರಿಸಬೇಕು. ಒಬಿಸಿ ಅಲೆಮಾರಿ ಪಟ್ಟಿಯಲ್ಲಿ 46 ಜಾತಿಗಳಿವೆ. 47ನೇ ಜಾತಿಯಾಗಿ ಕಾಡುಗೊಲ್ಲ ಸಮುದಾಯವನ್ನು ಸೇರಿಸಬೇಕು ಎಂದು ಒತ್ತಾಯಿಸಿದರು.
ಕಾಡುಗೊಲ್ಲರನ್ನು ಎಸ್.ಟಿ ಪಟ್ಟಿಗೆ ಸೇರಿಸುವಂತೆ ರಾಜ್ಯದಿಂದ ಪ್ರಸ್ತಾವನೆ ಕಳಿಸಿದ್ದರೂ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿಲ್ಲ. ಕಾಡುಗೊಲ್ಲ ಸಮುದಾಯ ನೂರಕ್ಕೆ ನೂರರಷ್ಟು ಬುಡಕಟ್ಟು ಸಮುದಾಯಗಳ ಲಕ್ಷಣಗಳನ್ನು ಹೊಂದಿದ್ದರೂ ಎಸ್.ಟಿ. ಪಟ್ಟಿಗೆ ಸೇರಬೇಕು. ಈಗ ಕಾಡುಗೊಲ್ಲರಲ್ಲಿ ನಡೆಯುತ್ತಿರುವ ಆಚರಣೆಗಳನ್ನು ಹಂತಹಂತವಾಗಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.