Saturday, October 19, 2024
Google search engine
Homeಜಿಲ್ಲೆತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ರೈತ ಸಂಘ ಒತ್ತಾಯ

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ರೈತ ಸಂಘ ಒತ್ತಾಯ

ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ಅವೈಜ್ಞಾನಿಕವಾಗಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ, ಕೊಬ್ಬರಿಗೆ ಕನಿಷ್ಠ 20 ಸಾವಿರ ರೂಪಾಯಿ ಬೆಂಬಲ ನೀಡಬೇಕು, ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ಕಾವೇರಿ ಜಲಾನಯನ ಪ್ರದೇಶದಲ್ಲಿ ಪೂರ್ವ ಮುಂಗಾರು, ಮುಂಗಾರು ಮಳೆ ಕೈಕೊಟ್ಟು ಶೇ 98ರಷ್ಟು ಬೆಳೆ ನಾಶವಾಗಿದೆ. ಭವಿಷ್ಯದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗುವ ಸಾದ್ಯತೆ ಇದೆ ಎಂದು ಸರ್ಕಾರದ ವರದಿಗಳೇ ಹೇಳುತ್ತಿದ್ದರೂ ಸರ್ಕಾರ ಕಾವೇರಿ ನೀರಾವರಿ ನಿರ್ವಹಣಾ ಸಮಿತಿಯ ಆದೇಶಕ್ಕೆ ಮನ್ನಣೆ ನೀಡಿದೆ ಎಂದು ದೂರಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಂಕಷ್ಟದ ಸಮಯದಲ್ಲಿ ತೆಮಿಳನಾಡಿಗೆ ಎಷ್ಟು ನೀರು ಹರಿಸಬೇಕು ಎಂಬ ನಿಗದಿತ ನೀತಿ ರೂಪಿಸದಿದ್ದರೂ ಪ್ರಾಧಿಕಾರ ಹೇಳಿದೆ ಎಂದ ಮಾತ್ರ ನೀರು ಹರಿಸುತ್ತಿರುವುದು ಸರಿಯಲ್ಲ. ಕೂಡಲೇ ಸುಪ್ರಿಂಕೋರ್ಟಿಗೆ ಅರ್ಜಿ ಸಲ್ಲಿಸಿ, ಕುಡಿಯುವ ನೀರಿಗೆ ಸಂಕಷ್ಟಪಡುತ್ತಿರುವ ಸಂದರ್ಭದಲ್ಲಿ ರಾಜ್ಯ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಿದರು.

ರಾಜ್ಯದಲ್ಲಿ ಈ ವರ್ಷ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ 136 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಶೇ60ರಷ್ಟು ಬೆಳೆ ನಷ್ಟವಾಗಿದೆ. ಸರ್ಕಾರ ಈಗಾಗಲೇ ಬೆಳೆ ವೈಫಲ್ಯ ಸಮೀಕ್ಷೆ ಆರಂಭಿಸಿದೆ. ಹಾಗಾಗಿ ಸರ್ಕಾರ ಕೂಡಲೇ ರಾಜ್ಯವನ್ನು ಬರಪೀಡಿತ ರಾಜ್ಯ ಎಂದು ಘೋಷಿಸಸಬೇಕು ಎಂದು ಆಗ್ರಹಿಸಿದರು.

ತುಮಕೂರು ಜಿಲ್ಲೆಯ 10 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ಹಾಗೆಯೇ ಬೆಳೆ ಪರಿಹಾರ, ಗೋಶಾಲೆ ತೆರೆಯುವುದು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡಬೇಕೆಂದು ಎ.ಗೋವಿಂದರಾಜು ತಿಳಿಸಿದರು.

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ದಿನದಲ್ಲಿ ಸುಮಾರು 7 ಗಂಟೆ ವಿದ್ಯುತ್ ಕಡಿತ ಮಾಡುತಿದ್ದು, ಉಚಿತ ವಿದ್ಯುತ್ ಹೆಸರಿನಲ್ಲಿ ಜನರಿಗೆ, ಅದರಲ್ಲಿಯೂ ರೈತರಿಗೆ ಕನಿಷ್ಠ 8 ಗಂಟೆಗಳ ಕಾಲ ಗುಣಮಟ್ಟದ ತ್ರೀ ಪೇಸ್ ವಿದ್ಯುತ್ ನೀಡಬೇಕೆಂಬುದು ರೈತರ ಬೇಡಿಕೆಯಾಗಿದೆ. ಯಾರು ಸರ್ಕಾರದ ಮುಂದೆ ನಮ್ಮ ಮನೆಗೆ ಉಚಿತ ವಿದ್ಯುತ್ ನೀಡಿ ಎಂದು ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಸರ್ಕಾರ ಜನರ ಮತ ಪಡೆಯಲು ಭರವಸೆ ನೀಡಿ, ಎಡಗೈಯಲ್ಲಿ ಕೊಟ್ಟು ಬಲಗೈಯಲ್ಲಿ ಕಿತ್ತುಕೊಳ್ಳುತ್ತಿದೆ ಎಂದು ದೂರಿದರು.

ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಂಕರಪ್ಪ, ಯುವ ಅಧ್ಯಕ್ಷ ಚಿರತೆ ಚಿಕ್ಕಣ್ಣ, ಕಾರ್ಯದರ್ಶಿ ಜಗದೀಶ್, ಜಿಲ್ಲಾ ಮುಖಂಡರಾದ ಶಿವಕುಮಾರ್, ಕೆ.ಲೋಕೇಶ್, ಚಿಕ್ಕಬೋರೇಗೌಡ, ಪೂಜಾರಪ್ಪ, ಡಿ.ಆರ್.ರಾಜಶೇಖರ್, ಭಾಗ್ಯಮ್ಮ ರಂಗಹನುಮಯ್ಯ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular