Thursday, September 19, 2024
Google search engine
Homeಮುಖಪುಟಜಾತಿವಾದ, ಮೂಲಭೂತವಾದದ ವಿಜೃಂಭಣೆ - ನಾಡೋಜ ಬರಗೂರು ರಾಮಚಂದ್ರಪ್ಪ ಆತಂಕ

ಜಾತಿವಾದ, ಮೂಲಭೂತವಾದದ ವಿಜೃಂಭಣೆ – ನಾಡೋಜ ಬರಗೂರು ರಾಮಚಂದ್ರಪ್ಪ ಆತಂಕ

ಅವರೇ ದುಡ್ಡು ಕೊಟ್ಟು, ಶಾಲು ತರಿಸಿ ಅಭಿನಂದನೆ ಗ್ರಂಥಗಳನ್ನು ಬರೆಸಿಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಭಿನಂದನೆ ಗ್ರಂಥಗಳ ಮೌಲ್ಯ ಕುಸಿದು ಹೋಗಿದೆ. ಆದರೆ ಕೆ.ದೊರೈರಾಜ್ ಅವರ ಕುರಿತು ಬಂದಿರುವ ಗ್ರಂಥ ಇದಕ್ಕೆ ಹೊರತಾಗಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ತುಮಕೂರಿನ ಕನ್ನಡಭವನದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ದೊರೈರಾಜ್ ಕುರಿತ ಏಕತೆಯ ಹೋರಾಟಗಾರ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತುಮಕೂರು ಪರಿಸರದಲ್ಲಿ ಎಚ್.ಜಿ.ಸಣ್ಣಗುಡ್ಡಯ್ಯ, ವೀಚಿ ಮತ್ತು ಕೆ.ಆರ್ ನಾಯಕ್ ಒಂದು ಕಾಲದಲ್ಲಿ ನಮ್ಮನ್ನು ಪ್ರಭಾವಿಸಿದರು. ಅವರ ನಂತರದ ಪೀಳಿಗೆಯಲ್ಲಿ ಅದೇ ಹಾದಿಯಲ್ಲಿ ನಡೆಯುತ್ತಿರುವ ಯಾರನ್ನಾದರೂ ಹೆಸರಿಸಬೇಕು ಅಂದರೆ ಅದು ಕೆ.ದೊರೈರಾಜ್. ಅವರ ವ್ಯಕ್ತಿತ್ವ ಇದೆಯಲ್ಲ ಅದು ವಿಶೇಷವಾದದ್ದು ಎಂದರು.

ಇಂದಿನ ಸಂದರ್ಭದಲ್ಲಿ ಜಾತಿವಾದ ಇದೆ, ಧಾರ್ಮಿಕ ಮೂಲಭೂತವಾದ ಇದೆ. ಇದು ಬಹುಸಂಸ್ಕೃತಿಗಳನ್ನು ವಿರೋಧಿಸುವುದು ಹೆಚ್ಚಾಗುತ್ತಿದೆ. ಸಮಾಜದಲ್ಲಿ ಅಸಹನೆ ಇದೆ. ಅಸಮಾನತೆ ಇದೆ. ಇದೆಲ್ಲದರ ಜೊತೆಗೆ ಅಹಂ ಇದೆ. ಅಬ್ಬರದ ಪ್ರಚಾರವಿದೆ. ಇದೆಲ್ಲವನ್ನು ವಿರೋಧಿಸುವ ವ್ಯಕ್ತಿತ್ವ ಇದೆಯಲ್ಲ, ಅದು ದೊರೈರಾಜ್ ಅವರ ವ್ಯಕ್ತಿತ್ವ. ಹಾಗಾಗಿ ದೊರೈರಾಜ್ ನಮಗೆಲ್ಲ ಬಹಳ ಮುಖ್ಯವಾಗಿ ಕಾಣುತ್ತಾರೆ ಎಂದು ಹೇಳಿದರು.

ದೊರೈರಾಜ್ ಅವರು ಜಾತಿವಾದಿ ವಿರೋಧಿಗಳು, ಧಾರ್ಮಿಕ ಮೂಲಭೂತವಾದದ ವಿರೋಧಿಗಳು, ಬಹುಸಂಸ್ಕೃತಿಯ ಪರವಾಗಿ ಇರುವವರು, ಅಸಮಾನತೆಯನ್ನು ವಿರೋಧಿಸಿಕೊಂಡು ಬಂದವರು. ಅಧಿಕಾರದಲ್ಲಿದ್ದು, ಹೋರಾಟಗಳಲ್ಲಿದ್ದು, ಅಹಂಕಾರವಿಲ್ಲದ, ಅಬ್ಬರವಿಲ್ಲದ ತಮ್ಮ ಕ್ರಿಯಾಶೀಲನೆಯಲ್ಲಿ ತೊಡಗಿಸಿಕೊಂಡು ಬಂದವರು ಎಂದು ಶ್ಲಾಘಿಸಿದರು.

ಬಹುಸಂಸ್ಕೃತಿಯನ್ನು, ಬಹತ್ವವನ್ನು ನಾಶ ಮಾಡುವ ಪ್ರವೃತ್ತಿಗಳು ಪ್ರಬಲವಾಗುತ್ತಿರುವ ಸಂದರ್ಭದಲ್ಲಿ ದೊರೈರಾಜ್ ಅವರಂಥವರು ಬಹಳ ಮುಖ್ಯವಾಗುತ್ತಾರೆ. ಅವರಲ್ಲಿ ಸಹನೆ ಇದೆ, ಸೌಜನ್ಯ ಇದೆ. ಸ್ಪಷ್ಟತೆ ಇದೆ, ಪ್ರಾಮಾಣಿಕತೆ ಇದೆ. ಇವೆಲ್ಲವನ್ನು ಒಳಗೊಳ್ಳುವಂತ ಗುಣ ಇದೆ. ಒಳಗೊಳ್ಳುವ ವ್ಯಕ್ತಿತ್ವ ಇದೆಯಲ್ಲ, ಅದೇ ಏಕತೆ. ಅಂದರೆ ಬಹುತ್ವವನ್ನು ಒಳಗೊಳ್ಳುವ ಗುಣವೇ ಏಕತೆ ಎಂದು ತಿಳಿಸಿದರು.

ವಿವಿಧತೆಯಲ್ಲಿ ಏಕತೆ ಎನ್ನುವುದು ಭಾರತ ಅಥವಾ ಭಾರತೀಯತೆಯ ಪ್ರತೀಕ. ಆದರೆ ಇವೊತ್ತು ಏಕತೆಯನ್ನು ಅಪಾರ್ಥದಲ್ಲಿ ಪರಿಭವಿಸಲಾಗುತ್ತಿದೆ. ನಮಗೆ ಭಾರತೀಯ ಭಾವೈಕ್ಯತೆ ಬೇಕು. ಭಾರತೀಯತೆಯ ಬಹುರೂಪ ಬೇಕು. ಅಲ್ಲಿಯೇ ನಿಜವಾದ ಭಾರತ ಇರುವಂತಹದ್ದು. ಅದು ಏಕತೆ. ಏಕತೆ ಎನ್ನುವುದು ಒಕ್ಕೂಟ. ಈ ಒಕ್ಕೂಟ ವಿವಿಧ ಸಂಸ್ಕೃತಿಗಳ ಒಕ್ಕೂಟ, ವಿವಿಧ ಧರ್ಮಗಳ ಒಕ್ಕೂಟ. ವಿವಿಧ ವಿಚಾರಧಾರೆಗಳ ಒಕ್ಕೂಟ. ಅಂತಹ ಒಕ್ಕೂಟವೆಂದರೆ ಅಲ್ಲಿ ಒಳಗೊಳ್ಳುವಿಕೆ ಇರಬೇಕು. ಆ ಒಳಗೊಳ್ಳುವಿಕೆಯ ಗುಣ ದೊರೈರಾಜ್ ಅವರಲ್ಲಿದೆ ಎಂದು ಅಭಿಪ್ರಾಯಪಟ್ಟರು.

ದೊರೈರಾಜ್ ಅವರಲ್ಲಿ ಮನುಷ್ಯ ಸಂಬಂಧಗಳನ್ನು ಗೌರವಿಸುವ ಗುಣವಿದೆ. ನಮ್ಮ ಸಿದ್ದಾಂತಗಳನ್ನು ಪ್ರಚಾರ ಮಾಡಲು, ಇನ್ನೊಬ್ಬರಿಗೆ ಮನವರಿಕೆ ಮಾಡಿಕೊಡಲು ಬೇಕಾಗಿರುವ ಮೂಲಗುಣವೇ ಮನುಷ್ಯ ಸಂಬಂಧಗಳು ಎಂಬುದನ್ನು ಮರೆಯುತ್ತೇವೆ. ಎಲ್ಲಿ ಮನುಷ್ಯ ಸಂಬಂಧ ಇರುವುದಿಲ್ಲವೋ ಅಲ್ಲಿ ನಮ್ಮ ಯಾವುದೇ ಸಿದ್ದಾಂತವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಿಲ್ಲ. ಮೊದಲು ಮನುಷ್ಯ ಸಂಬಂಧಗಳು ಗಾಢವಾಗಿರಬೇಕು. ಪರಸ್ಪರ ಗೌರವಿರಬೇಕು. ಪ್ರೀತಿ ಇರಬೇಕು. ಮನುಷ್ಯ ಸಂಬಂಧಗಳಿಗೆ ಸ್ಪಂದನೆಯೇ ಇಲ್ಲದಿದ್ದಾಗ ಸಿದ್ದಾಂತಗಳನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದರೆ ಅದು ಶುಷ್ಕವಾಗುತ್ತದೆ ಎಂದು ವಿಶ್ಲೇಷಿಸಿದರು.

1927ರಲ್ಲಿ ತುಮಕೂರಿನ ಎನ್.ಆರ್.ಕಾಲೋನಿಗೆ ಮಹಾತ್ಮ ಗಾಂಧಿ ಬಂದಿದ್ದರು. ಅಂದು ಗಾಂಧಿ ಸ್ವಚ್ಛತೆಯ ಕುರಿತು ಹೇಳಿದರು. ಅದನ್ನೇ ಇಂದು ಸ್ವಚ್ಛಭಾರತದ ಎಂದು ಕರೆಯಲಾಗುತ್ತಿದೆ. ಹಾಗಾಗಿ ಸ್ವಚ್ಛ ಭಾರತ ಕಲ್ಪನೆ ಒಳ್ಳೆಯದು. ಇದರಿಂದ ಬೀದಿ ಭಾರತ ಸ್ವಚ್ಛವಾಗುತ್ತಿದೆ. ಆದರೆ ಭಾವ ಭಾರತ ಮಲಿನವಾಗುತ್ತಲೇ ಇದೆ. ಬೀದಿ ಭಾರತದ ಜೊತೆ ಭಾವ ಭಾರತವೂ ಸ್ವಚ್ಚವಾಗಬೇಕಾಗಿರುವುದು ಬಹಳ ಮುಖ್ಯ. ಇವೊತ್ತು ಬೀದಿ ಭಾರತವನ್ನು ಸ್ವಚ್ಛ ಮಾಡಲಾಗುತ್ತಿದ್ದರೆ ಭಾವ ಭಾರತ ಹೆಚ್ಚೆಚ್ಚು ಮಲಿನವಾಗುತ್ತಿದೆ. ಹೀಗಾಗಿ ದೊರೈರಾಜ್ ಅವರು ಭಾವ ಭಾರತವನ್ನು ಸ್ವಚ್ಛಗೊಳಿಸುವ ಪರವಾಗಿ ಹೋರಾಡುತ್ತಿದ್ದಾರೆ ಎಂದರು.

ವೈರುಧ್ಯಗಳನ್ನು ಮೀರಿ ಒಂದಾಗಿಸುವ ಗುಣ ಅವರಲ್ಲಿದೆ. ಏಕತೆಯನ್ನು ಈ ಅರ್ಥದಲ್ಲಿ ಪರಿಭಾವಿಸಬೇಕು. ವೈರುಧ್ಯ ಅಂದರೆ ನೋವು ಇದ್ದ ಕಡೆ ನಲಿವು ಇರುತ್ತದೆ. ಇದು ಇಡೀ ಬದುಕಿನ ವೈರುಧ್ಯ. ನೋವು ಮತ್ತು ನಲಿವು ಎರಡೂ ಕೂಡ ಒಟ್ಟೊಟ್ಟಿಗೆ ಇರುತ್ತವೆ. ನೋವು – ನಲಿವು ನಡುವೆ ಬದುಕಬೇಕು ಅಂದರೆ ಅದಕ್ಕೆ ಒಂದು ಸಮಚಿತ್ತತೆ ಬೇಕು. ವೈರುಧ್ಯಗಳನ್ನು ಒಂದಾಗಿಸುವುದರ ಮೂಲಕ ಏಕತೆಯ ಪರಿಕಲ್ಪನೆಯನ್ನು ಸಾರ್ಥಕತೆಗೊಳಿಸುವ ಗುಣ ದೊರೈರಾಜ್ ಅವರಲ್ಲಿದೆ. ಅವರು ಎಂದೂ ಭ್ರಷ್ಟಾಚಾರಿ ಆಗಿರಲಿಲ್ಲ.

ಕಾಗದರಹಿತ ಕಚೇರಿ ಎಂಬ ದೊಡ್ಡ ಪರಿಕಲ್ಪನೆ ಇತ್ತೀಚೆಗೆ ಕೇಳಿಬರುತ್ತಿದೆ. ಇವುಗಳ ಬಹಳ ಮುಖ್ಯ ಅನ್ನುತ್ತಾರೆ. ಆದರೆ ನನಗೆ ಅನಿಸುತ್ತದೆ ಕಾಗದರಹಿತ ಕಚೇರಿಗಳನ್ನು ಮಾಡುವ ಮುಂಚೆ ಭ್ರಷ್ಟಾಚಾರರಹಿತ ಕಚೇರಿಗಳನ್ನು ಮಾಡುವುದು ಬಹಳ ಮುಖ್ಯ. ಆದರೆ ಎಲ್ಲ ಕಚೇರಿಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಕೆ.ದೊರೈರಾಜ್ ಮತ್ತು ಅನುರಾಧ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ಹಾಲಿ ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದಲಿಂಗಪ್ಪ, ನಿವೃತ್ತ ಪ್ರಾಂಶುಪಾಲ ಚೌಡಯ್ಯ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular