ಖಾಸಗಿ ಕಂಪನಿಗಳು ನೀಡುವ ಸಿಎಸ್ಆರ್ ಫಂಡನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನಲ್ಲಿಂದು 35 ಕಂಪನಿಗಳ ಪ್ರಮುಖರೊಂದಿಗೆ ಸಭೆ ನಡೆಸಿದ್ದು, ಕಂಪನಿಗಳು ಕೂಡ ಸಿಎಸ್ಆರ್ ಫಂಡ್ ನೀಡಲು ಒಪ್ಪಿಗೆ ಸೂಚಿಸಿವೆ ಎಂದ ತಿಳಿಸಿದ್ದಾರೆ.
ಕಂಪನಿಗಳು ನೀಡುವ 35 ಕೋಟಿ ರೂಪಾಯಿಗಳನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸಿಎಸ್ಆರ್ ಫಂಡನ್ನು ಬಳಕೆ ಮಾಡಿಕೊಳ್ಳುತ್ತೇವೆ. ಈ ಹಣದಲ್ಲಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಒದಗಿಸುವುದು ಮತ್ತು ಕಾಂಪೌಂಡ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.
ಎಲ್ಲಾ ಶಾಲೆಗಳನ್ನು ಗುಣಮಟ್ಟದ ಶಾಲೆಗಳನ್ನಾಗಿ ಮಾಡಬೇಕು ಎಂದು ಗುರಿ ಹೊಂದಿದ್ದೇವೆ. ಈ ಸಂಬಂಧ ಮತ್ತೊಂದು ಸಭೆಯನ್ನು ಮಾಡುತ್ತೇವೆ ಎಂದರು.
ತುಮಕೂರಿನಲ್ಲಿ ಬೃಹತ್ ಕೈಗಾರಿಕಾ ಹಬ್ ಸ್ಥಾಪನೆ ಮಾಡುತ್ತೇವೆ. ಇದಕ್ಕಾಗಿ ಈಗಾಗಲೇ 1700 ಕ್ಕೂ ಹೆಚ್ಚು ಎಕರೆ ಭೂಮಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.