ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಸರಿಯಾಗಿ ಓದದೇ ಇರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸೌಜನ್ಯ ಪ್ರಕರಣ ಮುಗಿದು ಹೋದ ಅಧ್ಯಾಯ ಎಂದು ಹೇಳಿರುವುದು ಅವರ ಬಾಲಿಶತನವನ್ನು ತೋರಿಸುತ್ತದೆ ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ದೂರಿದ್ದಾರೆ.
ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಾಜ್ಯದ ಮಾಹಿತಿ ಹಕ್ಕು ಹೋರಾಟ ಸಮಿತಿಯಿಂದ ಸೌಜನ್ಯ ಪರ ನ್ಯಾಯಕ್ಕಾಗಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಅವರು, ಸ್ವತಃ ವಕೀಲರಾಗಿರುವ ಮುಖ್ಯಮಂತ್ರಿಗಳು ಪ್ರಕರಣದ ತೀರ್ಪು ಓದಿ ನಂತರ ಮಾತನಾಡುವುದಾಗಿ ಪ್ರತಿಕ್ರಿಯಿಸಿದರೆ, ಗೃಹ ಸಚಿವರು ನೀಡಿರುವ ಹೇಳಿಕೆ ಮಾತ್ರ ನಿಜಕ್ಕು ನ್ಯಾಯ ಕೇಳುವ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ ಎಂದರು.
ಧರ್ಮಸ್ಥಳದಲ್ಲಿ 2012 ರಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಇಡೀ ವ್ಯವಸ್ಥೆಯ ಮೇಲೆ ನಡೆದ ಅತ್ಯಾಚಾರವಾಗಿದೆ. ಸಂವಿಧಾನ, ನ್ಯಾಯಾಂಗ ವ್ಯವಸ್ಥೆ, ಕಾನೂನು ಸುವ್ಯವಸ್ಥೆಯ ಮೇಲೆ ನಡೆದ ಅತ್ಯಾಚಾರವಾಗಿದೆ. ಹಾಗಾಗಿ ನಿವೃತ್ತ ನ್ಯಾಯಮೂರ್ತಿಯೊಬ್ಬರಿಂದ ಪ್ರಕರಣದ ಮರು ತನಖೆಗೆ ಒಳಪಡಿಸಿ, ಅತ್ಯಾಚಾರ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿ ಮಾಡಬೇಕು ಎಂದು ಒತ್ತಾಯಿಸಿದರು.
ಸೌಜನ್ಯ ಅತ್ಯಾಚಾರ ಪ್ರಕರಣದ ತನಿಖೆ ರಾಜ್ಯ ಪೊಲೀಸರಿಂದ, ಸಿಓಡಿ, ಸಿಬಿಐನಿಂದ ನಡೆದಾಗಲೂ ಸೌಜನ್ಯ ತಾಯಿ, ಅಪರಾದಿ ಸಂತೋಷರಾವ್ ಅಲ್ಲ ಎಂಬುದನ್ನು ಸಾರಿ ಸಾರಿ ಹೇಳಿದ್ದರೂ ಕೇಳದೆ, ಸಿಬಿಐ ಕೋರ್ಟು ಹೇಳಿದ ನಂತರ ಅಪರಾಧ ಅವರಲ್ಲ ಎಂಬುದನ್ನು ಒಪ್ಪಿಕೊಂಡಿದೆ. ಹಾಗಾದರೆ ಅಪರಾಧಿ ಯಾರು ಎಂದು ತಿಳಿಸುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ ಎಂದರು.
ನಿಜವಾದ ಅಪರಾಧಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವಂತೆ ಮಾಡಿದವರು ಯಾರು? ಎಂಬುದನ್ನು ಸಮಾಜಕ್ಕೆ ತಿಳಿಸಬೇಕಾದ್ದು, ಪೊಲೀಸ್ ಇಲಾಖೆಯ ಕರ್ತವ್ಯ. ಹಾಗಾಗಿ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದರು.
ಕೆಲವರು ಬಡವರು, ದಲಿತರು ಹಿಂದುಳಿದವರು, ಮಹಿಳೆಯರಿಗೆ ಆಗುವ ಅನ್ಯಾಯದ ವಿರುದ್ದ ಹೋರಾಟ ನಡೆಸುತ್ತಿರುವ ಒಡನಾಡಿ ಸಂಸ್ಥೆಯ ವಿರುದ್ಧ ಹಿಂದು ವಿರೋಧಿ ಎಂಬ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಒಡನಾಡಿ ತೆರೆದ ಪುಸ್ತಕವಿದ್ದಂತೆ. ಕ್ರಿಶ್ಚಿಯನ್ ಪಾದ್ರಿ ಗಳು ತಪ್ಪು ಮಾಡಿದಾಗಲು ಚರ್ಚ್ ಎದುರು ಪ್ರತಿಭಟನೆ ಮಾಡಿದ್ದೇವೆ. ನಮ್ಮ ಹೋರಾಟ ಜಾತ್ಯತೀತ, ಧರ್ಮಾತೀತ. ಸೌಜನ್ಯ ಪರವಾಗಿ ಇಡೀ ರಾಜ್ಯದಲ್ಲಿ ನ್ಯಾಯಕ್ಕಾಗಿ ಜನಸಾಮಾನ್ಯರು ದ್ವನಿ ಎತ್ತಿದ್ದಾರೆ. ಇದು ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ. ನಿಜವಾದ ಆರೋಪಿಗಳ ಬಂಧನ ಆಗುವವರೆಗೂ ಈ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದರು.
ಸಂತ್ರಸ್ಥೆ ತಾಯಿ ಕುಸುಮಾವತಿ ಮಾತನಾಡಿ, ನನ್ನ ಮಗಳಿಗೆ ಆಗಿರುವ ಆನ್ಯಾಯದ ವಿರುದ್ದ ಇಷ್ಟೊಂದು ಜನರು ನ್ಯಾಯ ಕೇಳುತ್ತಿರುವುದು ನಮಗೆ ಮತ್ತಷ್ಟು ಹೋರಾಟಕ್ಕೆ ಚೈತನ್ಯ ತಂದುಕೊಟ್ಟಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಸೌಜನ್ಯಪರ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ನಾನು ಭಾಗಿಯಾಗಲಿದ್ದೇನೆ ಎಂದರು.
ಪ್ರತಿಭಟನೆಯಲ್ಲಿ ಲೇಖಕಿ ಬಾ.ಹ.ರಮಾಕುಮಾರಿ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯಾಧ್ಯಕ್ಷ ಎಚ್.ಜಿ.ರಮೇಶ್, ಕಾರ್ಯಾಧ್ಯಕ್ಷ ಚನ್ನಯ್ಯ ವಸ್ತçದ್,ಕರ್ನಾಟಕ ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಹೆಚ್.ಬಿ.ರಾಜೇಶ್ ಇತರರು ಇದ್ದರು.


