ತೆಂಗು ಮತ್ತು ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಆಗಸ್ಟ್ 5ರಂದು ರಾಜ್ಯದ 15 ಜಿಲ್ಲೆಗಳ ಸಂಸದರ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಂಯುಕ್ತ ಕಿಸಾನ್ ಸಂಘದ ರಾಜ್ಯ ಸಂಚಾಲಕ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ತುಮಕೂರಿನಲ್ಲಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ತೆಂಗು ಬೆಳೆಗಾರರ ಸೀಮೆ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ತೆಂಗು ಮತ್ತು ಕೊಬ್ಬರಿ ಧಾರಣೆ ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳ ಕುರಿತ ಸಮಾಲೋಚನಾ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ತೆಂಗು ಮತ್ತು ಕೊಬ್ಬರಿ ವೈಜ್ಞಾನಿಕ ಬೆಂಬಲ ಬೆಲೆಯ ಮುಂದುವರೆದ ಭಾಗವಾಗಿ ಆಗಸ್ಟ್ 15ರಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲಾ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಅಕ್ಟೋಬರ್ 2ರಂದು ತಿಪಟೂರಿನಿಂದ ಬೆಂಗಳೂರಿಗೆ 15 ಜಿಲ್ಲೆಯ ರೈತರು ಪಾದಯಾತ್ರೆ ಪ್ರಾರಂಭಿಸಲಿದ್ದಾರೆ. ಅಕ್ಟೋಬರ್ 7ರಂದು ಪಾದಯಾತ್ರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶದೊಂದಿಗೆ ಪೂರ್ಣಗೊಳ್ಳಿದೆ ಎಂದು ಹೇಳಿದರು.
ತೋಟಗಾರಿಕಾ ಇಲಾಖೆ ನೀಡಿದ ವರದಿಯಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು 16,730ರೂ ಇದೆ. ಕೇಂದ್ರ ಸರ್ಕಾರ 11,750 ರೂಗಳ ಬೆಂಬಲ ಬೆಲೆ ಘೋಷಿಸಿದೆ. ಜೊತೆಗೆ ರಾಜ್ಯ ಸರ್ಕಾರ 1250 ರೂಗಳ ಪ್ರೋತ್ಸಾಹ ದನ ನೀಡದೆ. ಇವೆರಡು ಸೇರಿದರು ಉತ್ಪಾಧನಾ ವೆಚ್ಚದಷ್ಟು ಬೆಲೆ ಸಿಗುವುದಿಲ್ಲ. ಆದ್ದರಿಂದ ತೆಂಗು ಮತ್ತು ಕೊಬ್ಬರಿ ಬೆಲೆ ಸಮಸ್ಯೆಗೆ ತಾತ್ಕಾಲಿಕ ಮತ್ತು ದೂರಗಾಮಿ ಪರಿಣಾಮಗಳ ಹಿನ್ನೆಲೆಯಲ್ಲಿ ಕೋರ್ ಕಮಿಟಿ ಮತ್ತು ಸಮನ್ವಯ ಸಮಿತಿಗಳು ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಿದೆ ಎಂದರು.
ತೆಂಗು ಮತ್ತು ಕೊಬ್ಬರಿ ಬೆಲೆ ಹೆಚ್ಚಳಕ್ಕೆ ತಾತ್ಕಾಲಿಕ ಪರಿಹಾರವಾಗಿ ಕೇಂದ್ರ ಸರ್ಕಾರ ಕೂಡಲೇ ವಿದೇಶಗಳಿಂದ ಶೂನ್ಯ ತೆರಿಗೆ ಅಡಿಯಲ್ಲಿ ಅಮದು ಮಾಡಿಕೊಳ್ಳುತ್ತಿರುವ ತೆಂಗು ಉತ್ಪನ್ನಗಳು, ತಾಳೆ ಮತ್ತು ಇನ್ನಿತರ ಖಾದ್ಯ ತೈಲಳಿಗೆ ಕಡಿವಾಣ ಹಾಕಬೇಕು. ತೆಂಗು ಬೆಳೆಗೆ ಬರುವ ರೋಗಗಳ ನಿಯಂತ್ರಣ, ಇಳುವರಿ ಕುಸಿತ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೀರಾ ಮುಕ್ತ ಮಾರಾಟಕ್ಕೆ ಅವಕಾಶ, ಕೊಬ್ಬರಿಗೆ 11,750ರ ಬದಲು 20,000 ರೂ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸಬೇಕು. ರಾಜ್ಯ ಸರ್ಕಾರ 1250ರ ಬದಲು 5000 ರೂ ಪ್ರೋತ್ಸಾಹ ಧನ ನೀಡಬೇಕು. ತೆಂಗು ಉತ್ಪನ್ನಗಳನ್ನು ಸರ್ಕಾರದ ಉತ್ಪಾದನಾ ಸಂಸ್ಥೆಗಳಲ್ಲಿ ಬಳಸಲು ಉತ್ತೇಜಿಸಬೇಕು ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಸಿ.ಯತಿರಾಜು, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕರ್ನಾಟಕ ಕೃಷಿ ಕೂಲಿ ಕಾರ್ಮಿಕರ ಸಂಘದ ಎಸ್.ಎನ್. ಸ್ವಾಮಿ ಸಿಪಿಐ ಗಿರೀಶ್, ಕೆಪಿಆರ್.ಎಸ್ ನ ಎಚ್.ಆರ್. ನವೀನ್ ಕುಮಾರ್, ಜಿ. ಗೋಪಾಲ, ಪಾಪೇಗೌಡ ಇದ್ದರು.