ತುಮಕೂರಿನ ವಿರ್ವಾಣಿ ಲೇಔಟ್ ಶಾರದಾ ದೇವಿ ನಗರದಲ್ಲಿರುವ ಜೆ.ಪಿ ಪ್ರೌಢಶಾಲೆ ಮುಚ್ಚುತ್ತಿರುವ ವದಂತಿ ಹರಡಿದ ಹಿನ್ನಲೆಯಲ್ಲಿ ಆತಂಕಗೊಂಡ ಮಕ್ಕಳ ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಮುಖಂಡರು ಸೇರಿ ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿ ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಶಾಲೆ ಮುಚ್ಚುವುದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಎನ್.ಆರ್.ಕಾಲೋನಿಯ ಮಕ್ಕಳ ಭವಿಷ್ಯದ ಶಿಕ್ಷಣಕ್ಕಾಗಿ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಮಧ್ಯ ಪ್ರವೇಶಿಸಿ ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ ಸಮುದಾಯದ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ಎನ್.ಆರ್ ಕಾಲೋನಿ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ದೊರೈರಾಜ್ ಮಾತನಾಡಿ, ಇಡೀ ರಾಜ್ಯದಲ್ಲಿ ಮಾದಿಗ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಲು ಟಿ.ಎ ದಾಸಪ್ಪನವರು ಕಟ್ಟಿದ ಜಯಪ್ರಕಾಶ್ ಪ್ರೌಢಶಾಲೆ ಸರ್ಕಾರದ ಅನುಧಾನ ಪಡೆಯುವ ಏಕೈಕ ಅನುದಾನಿತ ಮಾದಿಗರ ಶಾಲೆಯಾಗಿದೆ. ಮೇನೇಜ್ಮೆಂಟ್ ಸಮಸ್ಯೆ ಎಲ್ಲಾ ಎಸ್ಸಿ-ಎಸ್ಟಿ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯವಾಗಿದೆ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಈ ಗೊಂದಲದಲ್ಲಿ ಮಕ್ಕಳು ಸಾಧ್ಯವಾಗದಿದ್ದರೆ ಶಿಕ್ಷಣ ಇಲಾಖೆಗೆ ತಮ್ಮ ಸೇವೆಯನ್ನು ಬೇರೆಡೆ ನಿಯೋಜನೆಗೊಳಿಸಿಕೊಳ್ಳಲು ಕೋರಬಹುದು ಎಂದರು.
ದಾಖಲಾತಿಯಿರುವ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಗೊಂದಲ ಸೃಷ್ಠಿಸಿ ಟಿ.ಸಿ ಯನ್ನು ಬೇರೆಡೆ ಕೊಡುತ್ತಿರುವುದು ಖಂಡನೀಯ. ಇದು ಹೇಯ ಕೃತ್ಯ, ಆಡಳಿತ ಮಂಡಳಿ ದಾವೆಗಳಿದ್ದರೆ ನಾವು ಜಿಲ್ಲಾಡಳಿತದಿಂದ ಆಡಳಿತಾಧಿಕಾರಿ ನೇಮಿಸಲು ಆಗ್ರಹಿಸಬಹುದಾಗಿದೆ. ಏಕೆಂದರೆ ಎನ್,ಆರ್ ಕಾಲೋನಿ ಅಂಬೇಡ್ಕರ್ ನಗರ ಹಾಗೂ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಇಲ್ಲಿ ಶಿಕ್ಷಣ ದೊರಕುತ್ತಿರುವುದರಿಂದ ಹೆಣ್ಣು ಮಕ್ಕಳು ಸೇರಿದಂತೆ ಎಲ್ಲರು ಬರುತ್ತಿದ್ದಾರೆ. ಈ ಶಾಲೆ ಮುಚ್ಚಿದಲ್ಲಿ ಈ ಪ್ರದೇಶದ ಎಲ್ಲಾ ಹೆಣ್ಣು ಮಕ್ಕಳು ಸೇರಿದಂತೆ ಉಳಿದ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಾರೆ ಆದ್ದರಿಂದ ಮಕ್ಕಳ ಭವಿಷ್ಯಕ್ಕಾಗಿ ಪೋಷಕರಲ್ಲಿ ಮೂಡಿರುವ ಆತಂಕವನ್ನು ನಿವಾರಿಸಲು ಆಂದೋಲನ ಮಾಡಬೇಕೆಂದು ಸಲಹೆ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯ ಅನಂತಕುಮಾರ್ ಮಾತನಾಡಿ, ಕಳೆದ 3 ವರ್ಷಗಳಿಂದ ಆಡಳಿತ ಮಂಡಳಿ ಶಿಕ್ಷಣ ಇಲಾಖೆ ಜೊತೆಗೆ ನಡೆಸಿರುವ ಇಬ್ಬರು ಕಾರ್ಯದರ್ಶಿಗಳ ಪತ್ರ ವ್ಯವಹಾರವನ್ನು ಸಭೆಯ ಗಮನಕ್ಕೆ ತಂದರು. ಅಲ್ಲದೆ ಏಕಾಏಕಿ ಆಡಳಿತ ಮಂಡಳಿ ಇಬ್ಬರು ಶಿಕ್ಷಕರನ್ನು ವಜಾಗೊಳಿಸಿ ಶಿಕ್ಷಣ ಇಲಾಖೆಗೆ ಪತ್ರ ನೀಡಿದೆ ಮಕ್ಕಳ ಸಂಖ್ಯೆಗೆ ಏನು ಕಡಿಮೆಯಿಲ್ಲ ಆದರೆ ಶಿಕ್ಷಕರ ಕೊರತೆಯಿಂದ ಎಸ್,ಎಸ್,ಎಲ್,ಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಟಿ.ಸಿಗಳನ್ನು ಪಡೆಯುತ್ತಿದ್ದಾರೆ. ನಾವು ಒತ್ತಾಯದಿಂದ ಟಿ.ಸಿಗಳನ್ನು ಕೊಡುತ್ತಿಲ್ಲ, ಆಡಳಿತ ಮಂಡಳಿ ಮತ್ತು ಶಿಕ್ಷಣ ಇಲಾಖೆ ಶಿಕ್ಷಕರನ್ನು ನೀಡಿದರೆ ಶಾಲೆಯನ್ನು ಮುಂದುವರಿಸಲು ಅನುಕೂಲವಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಆಂಜಿನಪ್ಪ, ನಿವೃತ್ತ ಮುಖ್ಯೋಪಾಧ್ಯಾಯಿನಿ ಅಂಬಿಕಾ, ಅಧ್ಯಾಪಕ ತಿಪ್ಪೇಸ್ವಾಮಿ, ನಿವೃತ್ತ ದೈಹಿಕ ಶಿಕ್ಷಕ ವಿಜಯಕುಮಾರ್, ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ, ದಸಂಸದ ಸಂಚಾಲಕ ಕೇಬಲ್ ರಘು, ಕೆ.ನರಸಿಂಹಮೂರ್ತಿ, ಹಳೇ ವಿದ್ಯಾರ್ಥಿಗಳ ಸಂಘದ ಜೆಸಿಬಿ ವೆಂಕಟೇಶ್, ವಿ.ಕೆಂಪರಾಜು, ಕಿಶೋರ್, ಗಂಗಾಧರ್, ಎನ್.ಆರ್ ಕಾಲೋನಿ ಮುಖಂಡ ಶಾಂತಕುಮಾರ್, ಅಂಬೇಡ್ಕರ್ ನಗರದ ವಿ.ಗೋಪಾಲ್, ನೀರ್ವಾಣಿ ಲೇಔಟ್ ಪುಟ್ಟರಾಜು, ಯುವಮುಖಂಡ ದಯಾನಂದ್, ಸುನೀಲ್, ಬಾಬು, ಟಿ.ಕೆ ಕುಮಾರ್, ಮೋಹನ್,ಟಿಆರ್, ರಮೇಶ್, ಕೊಳಗೇರಿ ಸಮಿತಿಯ ಅರುಣ್, ಕೃಷ್ಣಮೂರ್ತಿ, ಮುಬಾರಕ್ ಇದ್ದರು.