Friday, November 22, 2024
Google search engine
Homeಮುಖಪುಟಬಿಜೆಪಿ ನಾಯಕರ ನಿಜವಾದ ಬಣ್ಣ ಬಯಲಾಗುತ್ತಿದೆ - ವಿ.ಎಸ್.ಉಗ್ರಪ್ಪ

ಬಿಜೆಪಿ ನಾಯಕರ ನಿಜವಾದ ಬಣ್ಣ ಬಯಲಾಗುತ್ತಿದೆ – ವಿ.ಎಸ್.ಉಗ್ರಪ್ಪ

ಬಿಜೆಪಿ ನಾಯಕರು ಅಧಿಕಾರ ಕಳೆದುಕೊಂಡು ಬೆತ್ತಲಾಗಿದ್ದಾರೆ. ಅವರ ನಿಜವಾದ ಬಣ್ಣ ಬಯಲಾಗುತ್ತಿದೆ. ಶಾಸಕರಾಗಲು, ಮಂತ್ರಿಯಾಗಲು ಏನೆಲ್ಲ ಮಾಡಿದ್ದರು, ಹೇಗೆ ಮ್ಯಾಚ್ ಫಿಕ್ಸಿಂಗ್ ಮಾಡಿದ್ದರು ಎಂಬುದರ ಬಗ್ಗೆ ಅವರೇ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಮತ್ತು ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಉಭಯ ನಾಯಕರು, ಆಡಳಿತ ಪಕ್ಷದಲ್ಲಿದ್ದಾಗ ರಾಜ್ಯವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವ ಪ್ರವೃತ್ತಿಯನ್ನು ಅವರು ತೋರಲಿಲ್ಲ. ಈಗ ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದುಕೊಂಡು ರಾಜ್ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವು ಅನ್ನಭಾಗ್ಯ ಯೋಜನೆ ಜಾರಿ ಮಾಡಿ ಬಡವರಿಗೆ ಉಚಿತ ಅಕ್ಕಿ ನೀಡುವ ಕೆಲಸ ಮಾಡುತ್ತಿದೆ. ಬಡವರ ಹಸಿವನ್ನು ಅರಿತ ಕಾಂಗ್ರೆಸ್ ಸರ್ಕಾರ ಈ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ವ್ಯಕ್ತಿಗೆ 7 ಕೆಜಿ ಅಕ್ಕಿಯನ್ನು ನೀಡಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಇದನ್ನು 5 ಕೆಜಿಗೆ ಇಳಿಸಿತ್ತು. ಜನರ ಸಂಕಷ್ಟ ಅರಿತ ಕಾಂಗ್ರೆಸ್ ಬಡವರಿಗೆ ತಲಾ 10 ಕೆಜಿ ಅಕ್ಕಿ ನೀಡುವ ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿತು ಎಂದರು.

ಅಧಿಕಾರಕ್ಕೆ ಬಂದ ದಿನವೇ ತನ್ನ ಯೋಜನೆಗಳಿಗೆ ಚಾಲನೆ ನೀಡಿರುವಂತಹ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ನಮ್ಮ ಯೋಜನೆಗಳ ಬಗ್ಗೆ ಟೀಕೆ ಮಾಡುವ ಬಿಜೆಪಿ ನಾಯಕರು ತಾವು 2018ರ ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆಗಳ ಪೈಕಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

2014ರಲ್ಲಿ ಲೋಕಸಭೆ ಚುನಾವಣೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಭರವಸೆಗಳ ಪೈಕಿ ಎಷ್ಟನ್ನು ಈಡೇರಿಸಿದ್ದಾರೆ? ಕೇವಲ 100 ದಿನಗಳಲ್ಲಿ ಜನಸಾಮಾನ್ಯರ ದಿನ ಬಳಕೆ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡುವುದಾಗಿ ಹೇಳಿದ್ದರು. ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಬೆಲೆಗಳನ್ನು ಇಳಿಸುವುದಾಗಿ ಹೇಳಿದ್ದರು. 9 ವರ್ಷ ಕಳೆದರೂ ಯಾವುದನ್ನು ಈಡೇರಿಸಲಿಲ್ಲ. ಬದಲಿಗೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ದೂರಿದರು.

ಮೋದಿಯವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. 9 ವರ್ಷಗಳಲ್ಲಿ ಒಟ್ಟು 18 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಇದ್ದ ಉದ್ಯೋಗಗಳು ಮಾಯವಾಗುತ್ತಿವೆ. ವಿದೇಶಗಳಲ್ಲಿರುವ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು.

ಅಣ್ಣ ತಂಗಿ ಯೋಜನೆಯಲ್ಲಿ ಹೆಚ್ಚುವರಿ ಐದು ಕೆಜಿ ಅಕ್ಕಿ ಖರೀದಿ ಮಾಡುವ ವರೆಗೂ ಪ್ರತಿ ಕೆಜಿಗೆ 34 ರುನಂತೆ ಬಡ ಕುಟುಂಬದ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು 170ಗಳನ್ನು ಬ್ಯಾಂಕ್ ಖಾತೆಗೆ ಹಾಕುವುದಾಗಿ ನಮ್ಮ ಸರ್ಕಾರ ಹೇಳಿದರೆ, ಬಿಜೆಪಿ ನಾಯಕರು ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಅಧಿಕಾರ ಕಳೆದುಕೊಂಡಿರುವುದು ಒಂದು ಕಡೆಯಾದರೆ, ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದರಿಂದ ಹತಾಶಗೊಂಡಿರುವ ಬಿಜೆಪಿ ನಾಯಕರು ಈ ರೀತಿ ಮಾತನಾಡುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಈಗಾಗಲೇ ಶಕ್ತಿ ಯೋಜನೆಗಳ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ, ಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಯೋಜನೆ, ಅನ್ನಭಾಗ್ಯದ ಮೂಲಕ ಬಡ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡುವ ಯೋಜನೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಹತಾಶರಾಗಿದ್ದಾರೆ.

ಕೇಂದ್ರ ಸರ್ಕಾರದ ಬಳಿ ಅಕ್ಕಿ ದಾಸ್ತಾನು ಇದ್ದರು, ಖಾಸಗಿ ಅವರಿಗೆ ಮುಕ್ತ ಮಾರುಕಟ್ಟೆಯಲ್ಲಿ ಹರಾಜು ಹಾಕುತ್ತಿದೆ. ಆದರೆ ಬಡವರಿಗೆ ನೀಡಲು ಅಕ್ಕಿಯನ್ನು ಕರ್ನಾಟಕ ರಾಜ್ಯಕ್ಕೆ ನೀಡುತ್ತಿಲ್ಲ. ಬಡವರ ಅನ್ನದಲ್ಲಿ ರಾಜಕೀಯ ಮಾಡುವುದು ಎಷ್ಟು ಸರಿ? ರಾಜ್ಯದಿಂದ ಆಯ್ಕೆಯಾಗಿರುವ 25 ಜನ ಸಂಸದರು ಕೇಂದ್ರ ಸರ್ಕಾರದ ಮೇಲೆ ಯಾಕೆ ಒತ್ತಡ ಹಾಕಿಲ್ಲ? ಇಂತಹ ಜನ ವಿರೋಧಿ ಪ್ರವೃತ್ತಿ ಇರುವ ಯಾವುದಾದರೂ ಪಕ್ಷ ಇದ್ದರೆ ಅದು ಬಿಜೆಪಿ. ಬಿಜೆಪಿಯವರಿಗೆ ಪಕ್ಷ ನಿಷ್ಠೆಯೇ ಇಲ್ಲ ಇನ್ನು ಸಮಾಜ ಹಾಗೂ ಜನರ ಬಗ್ಗೆ ನಿಷ್ಠೆ ಇರಲು ಸಾಧ್ಯವೇ? ಎಂದು ಕೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular