ಕಳೆದ ತಿಂಗಳ 19 ಮತ್ತು 22ರಂದು ನಡೆದ ಎಸ್ಎಸ್ಎಲ್ ಪರೀಕ್ಷೆಯ ಫಲಿತಾಂಶವನ್ನು ಘೋಷಿಸಲಾಗಿದೆ. ಪ್ರಾರ್ಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಧ್ಯಮಗೋಷ್ಠಿಯಲ್ಲಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದ್ದು ಶೇ.99.99ರಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದ್ದಾರೆ.
ಬೇರೆ ವಿದ್ಯಾರ್ಥಿನಿಯೊಬ್ಬರು ಪರೀಕ್ಷೆ ಬರೆದ ಹಿನ್ನೆಲೆಯಲ್ಲಿ ಓರ್ವ ವಿದ್ಯಾರ್ಥಿನಿ ಈ ಬಾರಿಯ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಾರೆ. ಇನ್ನುಳಿದಂತೆ ಎಲ್ಲಾ ವಿದ್ಯಾರ್ಥಿಗಳು ಸಹ ಉತ್ತೀರ್ಣಗೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.
ಎ+ ದರ್ಜೆಯಲ್ಲಿ 1,28,931 ವಿದ್ಯಾರ್ಥಿಗಳು, ಎ ಗ್ರೇಡ್ ನಲ್ಲಿ 2,50,317 ವಿದ್ಯಾರ್ಥಿಗಳು, ಬಿ ಗ್ರೇಡ್ ನಲ್ಲಿ 2,87680 ವಿದ್ಯಾರ್ಥಿಗಳು, ಸಿ ಗ್ರೇಡ್ ನಲ್ಲಿ 1,13,610 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಅಂಕಿಅಂಶಗಳನ್ನು ನೀಡಿದರು.
625ಕ್ಕೆ ಶೇಕಡ 100ರಷ್ಟು ಅಂಕಗಳನ್ನು 157 ವಿದ್ಯಾರ್ಥಿಗಳು ಪಡೆದಿದ್ದಾರೆ. 623 ಅಂಕಗಳನ್ನು289 ವಿದ್ಯಾರ್ಥಿಗಳು, 622 ಅಂಕಗಳನ್ನು ಇಬ್ಬರು ವಿದ್ಯಾರ್ಥಿಗಳು ಪಡೆದಿದ್ದರೆ, 621 ಅಂಕಗಳನ್ನು 449 ವಿದ್ಯಾರ್ಥಿಗಳು ಗಳಿಸಿದ್ದಾರೆ. 620 ಅಂಕಗಳನ್ನು 28 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಸಚಿವರು ಪ್ರಕಟಿಸಿದರು.
ಪ್ರಥಮ ಭಾಷೆಯಲ್ಲಿ 125ಕ್ಕೆ 125 ಅಂಕಗಳನ್ನು 25,707 ಮಂದಿ ವಿದ್ಯಾರ್ಥಿಗಳು ಪಡೆದಿದ್ದಾರೆ. ದ್ವಿತೀಯ ಭಾಷೆಯಲ್ಲಿ 100ಕ್ಕೆ 100ರಷ್ಟು ಅಂಕಗಳನ್ನು 36,628 ವಿದ್ಯಾರ್ಥಿಗಳು ಗಳಿಸಿದ್ದಾರೆ. ತೃತೀಯ ಭಾಷೆಯಲ್ಲಿ 100ಕ್ಕೆ 100ರಷ್ಟು ಅಂಕಗಳನ್ನು 36,776 ವಿದ್ಯಾರ್ಥಿಗಳು ಪಡೆದಿದ್ದಾರೆ.
ಗಣಿತದಲ್ಲಿ 100ಕ್ಕೆ 100ರಷ್ಟು ಅಂಕಗಳನ್ನು 632 ಮಂದಿ ವಿದ್ಯಾರ್ಥಿಗಳು, ವಿಜ್ಞಾನದಲ್ಲಿ 100ಕ್ಕೆ 100ರಷ್ಟು ಅಂಕಗಳನ್ನು 3649 ವಿದ್ಯಾರ್ಥಿಗಳು ಮತ್ತು ಸಮಾಜ ವಿಜ್ಞಾನದಲ್ಲಿ 100ರಷ್ಟು ಅಂಕಗಳನ್ನು 9367 ಮಂದಿ ವಿದ್ಯಾರ್ಥಿಗಳು ಪಡೆದುಕೊಂಡು ಉತ್ತೀರ್ಣರಾಗಿದ್ದಾರೆ.
ದೇಶದಲ್ಲಿ ಎಲ್ಲಿಯೂ ನಡೆಯದ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ರಾಜ್ಯದಲ್ಲಿ ಮಾಡಿದೆವು. ಪೋಷಕರು ಪರೀಕ್ಷೆ ಬೇಕೆಂದು ಸರ್ಕಾರದ ಮೇಲೆ ಒತ್ತಡ ತಂದರು. ಮಕ್ಕಳನ್ನು ಪರೀಕ್ಷೆಗೆ ಕಳಿಸಿಕೊಟ್ಟರು. ಒಟ್ಟು 8,76,587 ಮಂದಿ ಮಕ್ಕಳು ಪರೀಕ್ಷೆ ಬರೆದಿದ್ದರು. ಇವರಲ್ಲಿ ಒಬ್ಬರನ್ನು ಡಿಬಾರ್ ಮಾಡಿದ್ದು ಉಳಿದವರೆಲ್ಲವರೂ ಉತ್ತೀರ್ಣಗೊಂಡಿದ್ದಾರೆ ಎಂದು ಸಚಿವರು ಹೇಳಿದರು.
ಮೊದಲ ಬಾರಿಗೆ ಪರೀಕ್ಷೆಯ ಫಲಿತಾಂಶವನ್ನು ಎಲ್ಲಾ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಕಳಿಸಿಕೊಡಲಾಗುವುದು. ಸಂಜೆ 6ಗಂಟೆಯ ವೇಳೆಗೆ ಎಲ್ಲ ವಿದ್ಯಾರ್ಥಿಗಳ ಮೊಬೈಲ್ ಗಳಲ್ಲಿ ಫಲಿತಾಂಶವನ್ನು ನೋಡಿಕೊಳ್ಳಬಹುದು. ಅಂಕಪಟ್ಟಿಗಳನ್ನು ಕಂಪ್ಯೂಟರ್ ಗೆ ಅಪ್ ಲೋಡ್ ಮಾಡಲಾಗುವುದು. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಮುಂದಿನ ಕೋರ್ಸ್ ಗೆ ಪ್ರವೇಶ ಪಡೆಯಬಹುದಾಗಿದೆ ಎಂದರು.