Monday, September 16, 2024
Google search engine
Homeರಾಜಕೀಯಹೆಸರಿನ ಮೋಹ ಇದ್ದರೆ ಹೊಸ ಯೋಜನೆ ಆರಂಭಿಸಲಿ

ಹೆಸರಿನ ಮೋಹ ಇದ್ದರೆ ಹೊಸ ಯೋಜನೆ ಆರಂಭಿಸಲಿ

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಕೈ ಹಾಕದೆ ಇರುವುದು ಉತ್ತಮ. ಆದರೆ ಬಿಜೆಪಿಗೆ ತಮ್ಮ ನಾಯಕರ ಹೆಸರಿನ ಬಗ್ಗೆ ಅಷ್ಟೊಂದು ಮೋಹ ಇದ್ದರೆ ಹೊಸ ಯೋಜನೆ ಆರಂಭಿಸಿ ಹೊಸ ಹೆಸರು ಇಟ್ಟುಕೊಂಡು ಮೆರೆದಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ದ ವಾಗ್ಪ್ರಹಾರ ನಡೆಸಿದ್ದಾರೆ.

ರಸ್ತೆ, ಕ್ರೀಡಾಂಗಣ, ಸರ್ಕಾರಿ ಸಂಸ್ಥೆಗಳಿಗೆ ರಾಷ್ಟ್ರೀಯ ನಾಯಕರ ಹೆಸರು ನಾಮಕರಣ ಮಾಡುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿ. ಈ ವಿಚಾರದಲ್ಲಿ ದ್ವೇಷರಾಜಕಾರಣ ಸರಿಯಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನ ಮೇಲು ಸೇತುವೆಗೆ ದೀನದಯಾಳ್ ಉಪಾಧ್ಯಾಯ, ನಗರ ಸಾರಿಗೆಗೆ ವಾಜಪೇಯಿ, ಗುಜರಾತ್ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಏಕೆ ಇಡಲಾಗಿದೆ. ಈ ಹೆಸರುಗಳನ್ನು ಕೇಂದ್ರ ಸರ್ಕಾರ ಬದಲಾಯಿಸುವುದೇ? ಎಂದು ಪ್ರಶ್ನಿಸಿದ್ದಾರೆ.

ಮೇಜರ್ ಧ್ಯಾನ್‍ಚಂದ್ ಅವರು ಶ್ರೇಷ್ಠ ಹಾಕಿ ಪಟು ಎಂಬುದರಲ್ಲಿ ಎರಡು ಮಾತಿಲ್ಲ. ಬೇರೆ ಪ್ರಶಸ್ತಿಗೆ ಅವರ ಹೆಸರು ಇಡಬಹುದಾಗಿತ್ತು. ರಾಜೀವ್‍ ಗಾಂಧಿಯವರ ಹೆಸರೇಕೆ ಬದಲಿಸಬೇಕು? ದೇಶಕ್ಕಾಗಿ ಸೇವೆ ಸಲ್ಲಿಸಿದವರ ಸ್ಮರಣೆಗೆ ರಾಷ್ಟ್ರೀಯ ನಾಯಕರ ಹೆಸರು ನಾಮಕರಣ ಮಾಡುವುದು ಒಂದು ಪರಂಪರೆ ಎಂಬುದನ್ನು ಬಿಜೆಪಿ ನಾಯಕರಿಗೆ ನೆನಪಿಸಿದ್ದಾರೆ.

ಗರೀಬಿ ಹಠಾವೋ ಘೋಷಣೆ ಮೂಲಕ ಬಡವರ ಏಳಿಗೆಗೆ ಶ್ರಮಿಸಿದ್ದ ಇಂದಿರಾಗಾಂಧಿ, ಭೂ ಸುಧಾರಣೆ ಕಾಯ್ದೆ ಕೂಡ ಜಾರಿಗೆ ತಂದವರು. ಈ ಕೊಡುಗೆಯನ್ನು ಗೌರವಿಸಿ ಇಂದಿರಾ ಕ್ಯಾಂಟೀನ್‍ಗೆ ಅವರ ಹೆಸರು ಇಡಲಾಗಿದೆ. ಅವರ ಸೇವೆಯನ್ನು ಗೌರವಿಸುವುದರಲ್ಲಿ ತಪ್ಪೇನಿದೆ? ಎಂದು ಕೇಂದ್ರ ಮತ್ತು ರಾಜ್ಯದ ಸರ್ಕಾರಗಳ ನಡೆಯನ್ನು ಪ್ರಶ್ನಿಸಿದ್ದಾರೆ.

ಬಡವರಿಗೆ ಕೊಡುತ್ತಿದ್ದ ಏಳು ಕೆ.ಜಿ. ಅಕ್ಕಿಯನ್ನು‌ ಕಡಿತಗೊಳಿಸಿದ ಬಿಜೆಪಿಗೆ ಬಡವರ ಬಗ್ಗೆ ಏನು ಕಾಳಜಿ ಇದೆ? ಬಿಜೆಪಿಗೆ ತಮ್ಮ ನಾಯಕರ ಹೆಸರಿನ ಬಗ್ಗೆ ಅಷ್ಟೊಂದು ಮೋಹ ಇದ್ದರೆ ಹೊಸ ಯೋಜನೆ ಪ್ರಾರಂಭಿಸಿ, ಹೊಸ ಹೆಸರು ಇಟ್ಟುಕೊಂಡು ಮೆರೆದಾಡಲಿ. ಬೇಡ ಎಂದವರು ಯಾರು? ಆ ಯೋಗ್ಯತೆ ಇವರಿಗಿಲ್ಲ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular