ಔರಾದ್ಕರ್ ವರದಿಯನ್ನು ಅನುಷ್ಠಾನಗೊಳಿಸಲು ಇರುವ ತೊಂದರೆಯ ಕುರಿತು ಅಧ್ಯಯನ ಮಾಡಿ ಅದನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಸಂಘಟನೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ನನಗೆ ಪೊಲೀಸ್ ಇಲಾಖೆಯ ಜವಾಬ್ದಾರಿ ವಹಿಸಿದ್ದಾರೆ. ಇದು ನನಗೂ ಹೊಸ ಜವಾಬ್ದಾರಿ. ಹಾಗಾಗಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಪೊಲೀಸ್ ಇಲಾಖೆಯನ್ನು ಸಶಕ್ತಗೊಳಿಸಲು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
ತುಮಕೂರಿಗೆ ಆಗಸ್ಟ್ 8ರಂದು ರಾತ್ರಿ ಭೇಟಿ ನೀಡಿದ ಸಂದರ್ಭದಲ್ಲಿ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜ್ಞಾನೇಂದ್ರ, ಪೊಲೀಸ್ ಇಲಾಖೆಯಲ್ಲಿ ಇದುವರೆಗೂ ಆಗದ ಕೆಲಸವನ್ನು ಮಾಡುತ್ತೇನೆ. ಸಂಘಟನೆ ಹಾಗೂ ಮುಖ್ಯಮಂತ್ರಿಗಳು ನನ್ನ ಹಿರಿತನ ಮತ್ತು ಅನುಭವವನ್ನು ಪರಿಗಣಿಸಿ ಪೊಲೀಸ್ ಇಲಾಖೆಯ ಹೊಸ ಜವಾಬ್ದಾರಿ ವಹಿಸಿದ್ದಾರೆ. ಇದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಇರುವುದರಿಂದ ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸುವಂತಹ ವಾತಾವರಣ ಇದೆ. ಇದರ ನಡುವೆಯೂ ಕೆಲವೊಂದು ಕೃತ್ಯಗಳು ನಡೆಯುತ್ತಿವೆ. ಸಮಾಜದಲ್ಲಿ ಇದೊಂದು ಮಹತ್ವದ ಇಲಾಖೆಯಾಗಿದ್ದು ಇಲಾಖೆಯನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತೇನೆ ಎಂದರು.
ಮುಂದಿನ ದಿನಗಳಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಇಲಾಖೆಯಲ್ಲಿ ಪ್ರಮುಖ ಬದಲಾವಣೆ ತರಲಾಗುವುದು. ನನ್ನ ಅನುಭವವನ್ನು ಬಳಸಿಕೊಂಡು ಮುಖ್ಯಮಂತ್ರಿಗಳು ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನರ್ವಹಿಸುತ್ತೇನೆ ಎಂದು ಹೇಳಿದರು.
ನಾನು ಮೊದಲಿನಿಂದಲೂ ಇಂಥದ್ದೇ ಖಾತೆ ನೀಡುವಂತೆ ಬೇಡಿಕೆ ಇಟ್ಟಿರಲಿಲ್ಲ. ಸಚಿವ ಸ್ಥಾನಕ್ಕಾಗಿ ಲಾಭಿಯನ್ನು ಮಾಡಿಲ್ಲ. ಯಾರ ಬಳಿಯೂ ಹೋಗಿ ನನಗೆ ಸಚಿವ ಸ್ಥಾನ ಕೊಡಿಸುವಂತೆ ಕೇಳಿಕೊಂಡಿಲ್ಲ. ಯಾವ ಖಾತೆಯನ್ನು ಕೊಟ್ಟಿದ್ದರೂ ನಿಭಾಯಿಸುತ್ತಿದ್ದೆ. ಆದರೆ ನನ್ನ ಮೇಲೆ ವಿಶ್ವಾಸವಿಟ್ಟು ಪ್ರಮುಖ ಮತ್ತು ಮಹತ್ವದ ಖಾತೆ ಕೊಟ್ಟಿದ್ದಾರೆ. ಹಾಗಾಗಿ ಕೆಲಸ ಮಾಡುತ್ತೇನೆ ಎಂದರು.
ಖಾತೆ ಹಂಚಿಕೆಯಲ್ಲಿ ಸಾಕಷ್ಟು ಗೊಂದಲಗಳು ಹುಟ್ಟಿಕೊಂಡಿವೆ. ಹಲವು ಮಂದಿ ಸಚಿವರು ತಮಗೆ ನೀಡಿರುವ ಖಾತೆಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಭಿನ್ನಮತ ಹೆಚ್ಚುತ್ತಿದೆಯಲ್ಲ ಎಂಬ ಮಾಧ್ಯಮಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಜ್ಞಾನೇಂದ್ರ ಅವರು “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಣಾಕ್ಷರಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ, ದೊಡ್ಡ ಪಕ್ಷ. ರಾಜಕೀಯ ಪಕ್ಷ ಅಂದಮೇಲೆ ಇವೆಲ್ಲ ಸಹಜ. ಪ್ರತಿಯೊಬ್ಬರಿಗೂ ಒಳ್ಳೆಯ ಖಾತೆ ಬೇಕೆನಿಸುವುದು ಸಹಜ. ಅದಕ್ಕೆ ಒಡಕು, ಸಿಟ್ಟು, ಸೆಡವು ಇದ್ದೇ ಇರುತ್ತದೆ. ಇದು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇರುವಂಥದ್ದೇ ಆಗಿದೆ’ ಎಂದು ತಿಳಿಸಿದರು.
ಹಜ್ ಮತ್ತು ವಕ್ಫ್ ಸಚಿವ ಶಶಿಕಲಾ ಜೊಲ್ಲೆ ಅವರು ಕೂಡ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು.