ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಜಿ ಸಚಿವ ಸೊಗಡು ಶಿವಣ್ಣ ಅವರನ್ನು ಬೆಂಲಿಸಲು ವೀರಶೈವ ಲಿಂಗಾಯತ ಸಮುದಾಯ ತೀರ್ಮಾನ ಕೈಗೊಂಡಿದೆ.
ತುಮಕೂರಿನಲ್ಲಿಂದು ಸಭೆ ಸೇರಿ ಚರ್ಚಿಸಿದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಸೊಗಡು ಶಿವಣ್ಣನವರಿಗೆ ಬೆಂಬಲಿಸಲು ನಿರ್ಧಾರ ತೆಗೆದುಕೊಂಡಿದ್ದು, ಸಮುದಾಯದ ತೀರ್ಮಾನ ಬಿಜೆಪಿಯ ಜ್ಯೋತಿ ಗಣೇಶ್ ಅವರಿಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ತುಮಕೂರಿನಲ್ಲಿ 500ಕ್ಕೂ ಹೆಚ್ಚು ಮಂದಿ ವೀರಶೈವ-ಲಿಂಗಾಯತ ಮುಖಂಡರುಗಳ ಸಭೆ ಸೇರಿ ಒಮ್ಮತದಿಂದ ಸೊಗಡು ಶಿವಣ್ಣ ಅವರಿಗೆ ಮತ ಚಲಾಯಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಬಾರಿ ಬಿಜೆಪಿಯ ಜ್ಯೋತಿಗಣೇಶ್ ಅವರನ್ನು ಬೆಂಬಲಿಸಿದ್ದ ಸಮುದಾಯ ಈ ಬಾರಿ ಬಿಜೆಪಿಗೆ ಕೈಕೊಟ್ಟು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸೊಗಡು ಶಿವಣ್ಣ ಅವರಿಗೆ ಬೆಂಬಲ ವ್ಯಕ್ತಪಡಿಸಿದೆ. ಸಮುದಾಯದ ತೀರ್ಮಾನ ಜ್ಯೋತಿಗಣೇಶ್ ಅವರಿಗೆ ಶಾಕ್ ನೀಡಿದಂತೆ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸೊಗಡು ಶಿವಣ್ಣ ಮಾತನಾಡಿ, ಇದು ನನ್ನ ಜೀವಮಾನದ ಕೊನೆಯ ಚುನಾವಣೆ. ಸ್ವಾಭಿಮಾನದ ಸಂಕೇತವಾಗಿ ಈ ಬಾರಿಯ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸಿದ್ದು, ಜಾತ್ಯತೀತವಾಗಿ, ಪಕ್ಷತೀತವಾಗಿ ಎಲ್ಲರೂ ಅತ್ಯಂತ ವ್ಯಾಪಕವಾಗಿ ಬೆಂಬಲಿಸುತ್ತಿರುವುದು ನನಗೆ ಸಂತಸ ತಂದಿದೆ. ಜೊತೆಗೆ ವೀರಶೈವ ಲಿಂಗಾಯತ ಸಮಾಜ ನನ್ನ ಬೆನ್ನಿಗೆ ನಿಂತು ಗೆಲುವಿಗೆ ಸಹಕರಿಸುತ್ತಿರುವು ನನಗೆ ತುಂಬ ಸಂತೋಷ ತಂದಿದೆ ಎಂದು ಭಾವುಕರಾಗಿ ನುಡಿದರು.
ಸಭೆಯಲ್ಲಿ ವೀರಶೈವ ಸಮಾಜ ಸೇವಾ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿ ಟಿ.ಎಸ್.ಶಿವಪ್ರಕಾಶ್, ಆಶಾ ಪ್ರಸನ್ನ ಕುಮಾರ್, ಕೆ.ಜೆ. ರುದ್ರಪ್ಪ, ಮೋಹನ್ ಕುಮಾರ್ ಪಟೇಲ್, ಬಿ.ಎಸ್.ಮಂಜುನಾಥ್, ಸುಜಾತ ಚಂದ್ರಶೇಖರ್, ಹೆಬ್ಬಾಕ ಮಲ್ಲಿಕಾರ್ಜುನ್, ಶೀಲ ಸೋಮಶೇಖರ್, ಜೆ.ಕೆ.ಅನಿಲ್ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ವೀರಶೈವ ಲಿಂಗಾಯಿತ ಸಮಾಜದ ಮುಖಂಡರು ಹಾಗೂ ಶಿವಣ್ಣ ಅವರ ಹಿತೈಶಿಗಳು ಭಾಗಿಯಾಗಿದ್ದರು.