ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 4ರ ಸೀಬಿ ಬಳಿ ಸಂಭವಿಸಿದೆ. ಮೃತರನ್ನು ಹರ್ಷ ಮತ್ತು ಚಂದ್ರಕಲಾ ಎಂದು ಗುರುತಿಸಲಾಗಿದೆ.
ತುಮಕೂರಿನ ಅಶೋಕ ನಗರದ ನಿವಾಸಿಗಳಾದ ಹರ್ಷ ಮತ್ತು ಚಂದ್ರಕಲಾ ದಂಪತಿ ಬೈಕ್ ನಲ್ಲಿ ಸೀಬಿ ನರಸಿಂಹಸ್ವಾಮಿ ದೇವಾಲಯಕ್ಕೆ ಪೂಜೆ ಮಾಡಿಸಿಕೊಂಡು ಬರಲು ತೆರಳಿದ್ದರು.
ಪೂಜೆ ಮುಗಿಸಿಕೊಂಡು ವಾಪಸ್ ಆಗುವ ವೇಳೆ ಎನ್.ಎಚ್.4ರಲ್ಲಿ ಬೈಕ್ ಅನ್ನು ಎಡಭಾಗಕ್ಕೆ ತಿರುಗಿಸಿಕೊಳ್ಳುವ ಸಂದರ್ಭದಲ್ಲಿ ಹಿಂದಿನಿಂದ ಬಂದ ಕೇರಳ ಮೂಲದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ಮೃತದೇಹಗಳನ್ನು ಸಿರಾ ಸರ್ಕಾರಿ ಆಸ್ಪತ್ರೆಗೆ ಕೊಂಡಯ್ಯಲಾಗಿದ್ದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮೃತ ಹರ್ಷ ಮತ್ತು ಚಂದ್ರಕಲಾ ಅವರು ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅವರ ಪುತ್ರ ಮತ್ತು ಸೊಸೆ ಎಂದು ಗುರುತಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಜನಪರ ಚಿಂತಕ ಕೆ.ದೊರೈರಾಜ್, ಸಾಹಿತಿ ಜಿ.ವಿ.ಆನಂದಮೂರ್ತಿ, ವಕೀಲರಾದ ಮಾರುತಿಪ್ರಸಾದ್, ಎಚ್.ವಿ.ಮಂಜುನಾಥ್, ಡಾ.ಎಚ್.ವಿ.ರಂಗಸ್ವಾಮಿ, ನಿವೃತ್ತ ಇಂಜಿನಿಯರ್ ರಾಮಚಂದ್ರಪ್ಪ, ಸಾಹಿತಿ ನಾಗರಾಜ ಶೆಟ್ಟಿ ಮೊದಲಾದವರು ಆಗಮಿಸಿ ಪುತ್ರ ಹಾಗೂ ಸೊಸೆಯನ್ನು ಕಳೆದುಕೊಂಡಿರುವ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅವರಿಗೆ ಸಾಂತ್ವನ ಹೇಳಿದರು.
ಮೇ 7ರಂದು ಮಧ್ಯಾಹ್ನ 12 ಗಂಟೆಗೆ ಚಿಕ್ಕಪೇಟೆಯ ಸಮೀಪ ಇರುವ ಸ್ಮಶಾನದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.