ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಪ್ರಧಾನಿ ನರೇಂದ್ರಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರು ನಗರದಲ್ಲಿ ರೋಡ್ ಶೋ ನಡೆಸಿದ ಬಳಿಕ ಹಮ್ಮಿಕೊಂಡಿದ್ದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ಅವರೇ ಒಪ್ಪಿರುವ ಬಜರಂಗಿಗಳನ್ನು ಹಿಯಾಳಿಸಿ, ಕಾಂಗ್ರೆಸ್ ಅಂತಿಮ ಹಂತಕ್ಕೆ ಬಂದು ತಲುಪಿದೆ. ಜೆಡಿಎಸ್ ಕೂಡ ಅದೇ ದಾರಿಯಲ್ಲಿದ್ದು, ದೇಶ ಇಂದು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಡಬಲ್ ಇಂಜಿನ್ ಸರಕಾರದಲ್ಲಿ ಪರಿಹಾರವಿದೆ ಎಂದರು.
ಕಳೆದ ಒಂಬತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆದಿವೆ. ನಡೆಯುತ್ತಲೂ ಇವೆ. ಆದರೆ ಈ ಹಿಂದೆ ಅಧಿಕಾರ ನಡೆಸಿದ ಜೆಡಿಎಸ್ ಮತ್ತು ಕಾಂಗ್ರೆಸ್ ಮೇಲೆ ಭ್ರಷ್ಟಾಚಾರದ ಆರೋಪವಿದೆ. ತಾತ, ಮಕ್ಕಳು, ಮೊಮ್ಮಕ್ಕಳ ಹೆಸರಿನಲ್ಲಿ ಕರ್ನಾಟಕವನ್ನು ಲೂಟಿ ಮಾಡಲಾಗಿದೆ ಎಂದು ದೂರಿದರು.
ನಮ್ಮನ್ನು 40 ಪರ್ಸೆಟ್ ಕಮಿಷನ್ ಸರಕಾರ ಎಂದು ಹೇಳುತ್ತಿರುವ ಕಾಂಗ್ರೆಸ್‌ನ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರೇ ಹೇಳಿರುವಂತೆ ಅವರದ್ದು ಶೇ85 ಕಮಿಷನ್ ಸರಕಾರ. ನೂರು ಪೈಸ್ ದೆಹಲಿಯಿಂದ ಬಿಡುಗಡೆಯಾದರೆ ಜನರಿಗೆ ತಲುಪುವುದು 15ಪೈಸೆ ಮಾತ್ರ ಎಂದು ಹೇಳಿದ್ದರು. ಕಾಂಗ್ರೆಸ್ ಲೂಟಿಗೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಗೆ ರೈತರ ಹೊಲಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಎತ್ತಿನ ಹೊಳೆ ಮತ್ತು ಭದ್ರ ಮಲ್ದೆಂಡೆ ಯೋಜನೆ ಜಾರಿಯಲ್ಲಿದ್ದರೂ ಅವು ಕಾಂಗ್ರೆಸ್, ಜೆಡಿಎಸ್ ಕಾಲದಲ್ಲಿ ಕುಂಟುತ್ತಾ ಸಾಗಿದ್ದವು. ನಮ್ಮ ಸರಕಾರದಲ್ಲಿ ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ ನೀಡುವ ಮೂಲಕ ತ್ವರಿತಗೊಳಿಸಲಾಗಿದೆ. ಹಾಗೆಯೇ ಎತ್ತಿನ ಹೊಳೆ ಯೋಜನೆಯನ್ನು ತ್ವರಿತವಾಗಿ ಮುಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಸರಕಾರ ಕೈಗೊಂಡಿದೆ ಎಂದರು.