ರಾಜ್ಯ ಬದಲಾವಣೆಯಾಗುವ ದಿನ ಹತ್ತಿರದಲ್ಲಿದೆ. ಈ ಪ್ರದೇಶದ ಜನ ಪ್ರತಿ ಕ್ಷೆತ್ರದಲ್ಲಿ ತಮ್ಮ ಪರಿಶ್ರಮದಿಂದ ಈ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದೀರಿ. ಕಲಾ ಕ್ಷೇತ್ರದಿಂದ ಐಟಿ ಬಿಟಿ ಕ್ಷೇತ್ರದವರೆಗೆ, ಹಾಲು ಉತ್ಪಾದನೆ, ಕೃಷಿ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಿಮ್ಮ ರಾಜ್ಯದ ಹೆಸರನ್ನು ಉಜ್ವಲಗೊಳಿಸಿದ್ದೀರಿ ಎಂದು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ದ್ವೇಷ ಪಸರಿಸುತ್ತಿರುವವರ ವಿರುದ್ಧ ಹೋರಾಡಲು ಭಾರತ ಜೋಡೋ ಯಾತ್ರೆ ಮಾಡಲಾಯಿತು. ಬಿಜೆಪಿಯ ಈ ದ್ವೋಷ ರಾಜಕೀಯದಿಂದ ದೇಶವನ್ನು ಮುಕ್ತಿಗೊಳಿಸುವ ಹೊರತಾಗಿ ಕರ್ನಾಟಕ ಹಾಗೂ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಲಕ್ಷಾಂತರ ಜನ ರಾಹುಲ್ ಗಾಂಧಿ ಅವರ ಜತೆ 4 ಸಾವಿರ ಕಿ.ಮೀ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಯಾತ್ರೆಯಲ್ಲಿ ಬಿಜೆಪಿಗೆ ಎಷ್ಟು ಭಯವಾಗಿದೆ ಎಂದರೆ, ಅವರು ಎಲ್ಲ ರೀತಿಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಇಂದು ಅಧಿಕಾರದಲ್ಲಿರುವವರು ಜನರ ರಕ್ಷಣೆ ಮಾಡುವ ಬದಲು ಹಣ ಮಾಡಿಕೊಳ್ಳುತ್ತಿದ್ದಾರೆ ಎಂದರು.
ನಿಮ್ಮ ಪರವಾಗಿ ನಾನು ಅವರಿಗೆ ಒಂದು ಮಾತು ಹೇಳಬಯಸುತ್ತೇನೆ. ನೀವು ಕರ್ನಾಟಕ ರಾಜ್ಯದ ಜನರನ್ನು ಇಷ್ಟು ದಡ್ಡರೆಂದು ಭಾವಿಸಬೇಡಿ. ಕರ್ನಾಟಕದ ಜನ ತಮ್ಮ ಪರಿಶ್ರಮ ಹಾಗೂ ಸಂಕಲ್ಪದ ಮೇಲೆ ಭರವಸೆ ಇಟ್ಟಿದ್ದಾರೆ ಹೊರತು ಬೇರೆ ಯಾರ ಆಶೀರ್ವಾದದಿಂದಲೂ ಅಲ್ಲ. ಕರ್ನಾಟಕದ ಜನ ದುರಾಸೆ ಇರುವವರಲ್ಲ, ನಿಮ್ಮ ಬೆದರಿಕೆಗಳಿಗೆ ಹೆದರುವವರೂ ಅಲ್ಲ. ಕರ್ನಾಟಕದ ಜನ ಮೇ 10 ರಂದು ನಿಮಗೆ ಈ ಮಣ್ಣಿನ ಶಕ್ತಿ ಏನು ಎಂದು ತಿಳಿಸಲಿದ್ದಾರೆ ಎಂದು ಹೇಳಿದರು.
ಇಂದು ಲಕ್ಷಾಂತರ ರೈತರು ಹಾಗೂ ಹಾಲು ಉತ್ಪಾದಕರನ್ನು ಕತ್ತಲೆಗೆ ದೂಡಲು ನಂದಿನಿಯಂತಹ ಅತ್ಯುತ್ತಮ ಸಂಸ್ಥೆಯನ್ನು ನಾಶ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ. ಇದು ರಾಜ್ಯದಲ್ಲಿ ಯಶಸ್ವಿಯಾಗುವುದಿಲ್ಲ. ಜನರ ಆಶೀರ್ವಾದದಿಂದ ನಾಯಕರಾಗುತ್ತಾರೆಯೇ ಹೊರತು, ಯಾವುದೇ ನಾಯಕರ ಆಶೀರ್ವಾದದಿಂದ ಈ ರಾಜ್ಯದ ಜನರ ಭವಿಷ್ಯ ನಿರ್ಧಾರವಾಗುವುದಿಲ್ಲ ಎಂದು ಈ ಸಮಯದಲ್ಲಿ ಬಿಜೆಪಿಯವರಿಗೆ ಹೇಳಬಯಸುತ್ತೇನೆ. ಜನರು ತಮ್ಮ ಭವಿಷ್ಯವನ್ನು ತಾವೇ ಬರೆದುಕೊಳ್ಳುತ್ತಾರೆ.
ಭಗವಾನ್ ಬಸವಣ್ಣ ಅವರು ಈ ಭೂಮಿಯಿಂದ ಹುಟ್ಟಿದ್ದಾರೆ. ಅವರು ಯಾರ ಮಾತಿಗೂ ಅಂಜದೇ ಎಲ್ಲರನ್ನು ಸಮಾನತೆ ನೀಡುವ ಹೋರಾಟ ಮಾಡಿದ್ದರು. ಇದು ಕುವೆಂಪು ಅವರ ಭೂಮಿಯಾಗಿದ್ದು, ಬಿಜೆಪಿ ಇವರ ತತ್ವಗಳನ್ನು ಪ್ರತಿನಿತ್ಯ ಅಪಮಾನಿಸುತ್ತಲೇ ಬಂದಿದೆ. ದೇಶದ ಇತಿಹಾಸ ಹಾಗೂ ಕರ್ನಾಟಕದ ಸಾಮಾಜಿಕ ನ್ಯಾಯದ ಪರಂಪರೆಯನ್ನು ನಾಶ ಮಾಡುವ ಪ್ರಯತ್ನ ಮಾಡಬೇಡಿ. ಬಿಜೆಪಿ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ರಾಜ್ಯ ಹಾಗೂ ದೇಶವನ್ನು ಒಡೆಯುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯವನ್ನು ಯಾವ ಸ್ಥಿತಿಗೆ ತಂದಿದ್ದಾರೆ ಎಂದು ಎಲ್ಲರೂ ನೋಡಿದ್ದಾರೆ. ಇಂತಹ ಸರ್ಕಾರವನ್ನು ತೊಲಗಿಸುವ ಶಪತವನ್ನು ನಿವೆಲ್ಲರೂ ಕೈಗೊಳ್ಳಬೇಕು.
ನೀವು ಸಂತರ ತತ್ವ ಸಿದ್ಧಾಂತದ ಮೇಲೆ ದಾಳಿ ಮಾಡುವವರ ಪರ ನಿಲ್ಲುತ್ತೀರೋ ಅಥವಾ ಎಲ್ಲಾ ವರ್ಗದವರ ಕಲ್ಯಾಣಕ್ಕಾಗಿ ಹೋರಾಟ ಮಾಡುವವರ ಪರವಾಗಿ ನಿಲ್ಲುತ್ತೀರೋ ಎಂಬುದನ್ನು ನೀವು ನಿರ್ಧರಿಸಬೇಕು. ಈ ರಾಜ್ಯವನ್ನು ಲೂಟಿ ಹಾಗೂ ಕಮಿಷನ್ ನಿಂದ ದೂರ ಮಾಡಬೇಕು. ಆಮೂಲಕ ರಾಜ್ಯವನ್ನು ವಿಕಾಸದತ್ತ ತೆಗೆದುಕೊಂಡು ಹೋಗಬೇಕು. ಸಾಮಾಜಿಕ ನ್ಯಾಯ, ಸದ್ಭಾವನೆಯ ಪರಂಪರೆ ರಕ್ಷಿಸಲು ನೀವು ಯಾರ ಪರವಾಗಿ ನಿಲ್ಲುತ್ತೀರಿ? ಎಂದು ಪ್ರಶ್ನಿಸಿದರು.