Friday, September 20, 2024
Google search engine
Homeಮುಖಪುಟವಚನಕಾರರು ಎಲ್ಲಾ ಸಮುದಾಯದವರನ್ನು ಗೌರವಿಸಿದರು - ಎಂ.ಗೋವಿಂದರಾಯ

ವಚನಕಾರರು ಎಲ್ಲಾ ಸಮುದಾಯದವರನ್ನು ಗೌರವಿಸಿದರು – ಎಂ.ಗೋವಿಂದರಾಯ

ಸಮಾಜದ ಬಹುತ್ವಕ್ಕೆ ದೊಡ್ಡ ಧ್ವನಿಯಾದವರು ವಚನಕಾರರು. ಹುಸಿ ಕಲ್ಪನೆಗಳ ವಿಮರ್ಶಿಸಿದರು. ಮೌಢ್ಯತೆ ನಿರಾಕರಿಸಿದರು. ಎಲ್ಲಾ ಸಮುದಾಯದವರನ್ನು ಗೌರವಿಸಿದರು. ಎಲ್ಲಾ ತಾರತಮ್ಯಗಳ ನಿರಾಕರಿಸಿ ಸಮಾನತೆ ಸಾರಿದರು ಎಂದು ಸಹಾಯಕ ಪ್ರಾಧ್ಯಾಪಕ ಎಂ.ಗೋವಿಂದರಾಯ ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯು ಪ್ರತಿ ನಾಲ್ಕನೇ ಶನಿವಾರ ಹಮ್ಮಿಕೊಳ್ಳುವ ವಚನ-ನಿರ್ವಚನ ಸರಣಿ ಕಾರ್ಯಕ್ರಮದಡಿಯಲ್ಲಿ ಈ ಮಾಸಿಕದ ಬಸವ ಜಯಂತಿ ಕಾರ್ಯಕ್ರಮದ ಅತಿಥಿಗಳಾಗಿ ಅವರು ಮಾತನಾಡಿ, ಮನುಷ್ಯರ ಘನೆತೆಯನ್ನು ಶ್ರಮ ಸಂಸ್ಕೃತಿಯನ್ನು ಎತ್ತಿಹಿಡಿದವರು ವಚನಕಾರರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಲೂ ಎಂಬುದು ಶರಣರ ನಿಲುವಾಗಿತ್ತು ಎಂದು ಹೇಳಿದರು.

12ನೇ ಶತಮಾನದ ವಚನ ಚಳವಳಿಯ ಬಹುದೊಡ್ಡ ಶಕ್ತಿ ಬಸವಣ್ಣ. ಬಾಗೇವಾಡಿಯ ಅಗ್ರಹಾರ ಸಂಸ್ಕೃತಿಯ ಭಿನ್ನ ಬೇಧಗಳನ್ನು ಕಣ್ಣಾರೆ ಕಂಡ ಬಸವಣ್ಣ ಅದನ್ನು ಪ್ರಶ್ನೆ ಮಾಡಿ ಅದರಿಂದ ಹೊರಬಂದರು. ಅರಿವಿನ ದಾಹಕ್ಕೆ ಹೆಣ್ಣುಗಂಡು ಎಂಬ ಬೇಧವಿಲ್ಲ ಎಂದು ಪ್ರತಿಪಾದಿಸಿದರು ಎಂದರು.

ಬಸವಣ್ಣನ ಪ್ರಜ್ಞೆ ಮಹಿಳೆಯರ ಬಗ್ಗೆ ದೊಡ್ಡ ಕ್ರಾಂತಿಯನ್ನೇ ಮಾಡಿತು. ಮಹಿಳೆಯರಿಗೆ ಆಧ್ಯಾತ್ಮಕ ಕ್ಷೇತ್ರದಲ್ಲಿ ಪ್ರವೇಶ ಸಿಕ್ಕಿತು. ವಚನಕಾರರಲ್ಲಿ ಕುಟುಂಬವಿಡೀ ತೊಡಗಿಸಿಕೊಳ್ಳುವ ಕಾಯಕ ಸಂಸ್ಕೃತಿ ಇತ್ತು. ವಚನಕಾರರು ಮಹಿಳೆಯರನ್ನು ನಡೆಸಿಕೊಂಡ ರೀತಿ ಮಾನವೀಯವಾಗಿತ್ತು. ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟರು. ಸಾಮಾನ್ಯ ಕಾಯಕ ಮಾಡುವವರು ಕೂಡ ವಚನ ರಚನೆಯಲ್ಲಿ ಭಾಗವಹಿಸಲು ಅನುಭವ ಮಂಟಪದ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಇತ್ತು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲೇಸಂ ಜಿಲ್ಲಾಧ್ಯಾಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಆಧುನಿಕ ಕಾಲದಲ್ಲಿಯೂ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗದೆ ಇದೆ. ರಾಜಕೀಯ ಕ್ಷೇತ್ರದಲ್ಲಿ ಮಹಿಲೆಯರಿಗೆ ಸಮಾನ ಅವಕಾಶ ಇನ್ನೂ ಸಿಕ್ಕಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾರ್ಯಗಳಲ್ಲೂ ನಿರ್ಣಯ ತೆಗೆದುಕೊಳ್ಳುವ ಹಂತಗಳಲ್ಲೂ ಮಹಿಳೆಯರಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗಬೇಕಿದೆ ಎಂದು ತಿಳಿಸಿದರು.

ವಚನ-ನಿರ್ವಚನ ಕಾರ್ಯಕ್ರಮದ ಸಂಚಾಲಕಿ ಸುಮಾ ಪ್ರಸನ್ನ ಪ್ರಾಸ್ತಾವಿಕ ಮಾತನಾಡಿದರು. ರಾಗಿಣಿ ಮತ್ತು ಕುಮುದಿನಿ ಬಸವಣ್ಣನ ವಚನಗಳನ್ನು ಹಾಡಿದರು. ಸಿ.ಎಲ್.ಸುನಂದಮ್ಮ ನಿರೂಪಿಸಿದರು. ಲಲಿತ ಮಲ್ಲಪ್ಪ ಸ್ವಾಗತಿಸಿದರು. ಪಾರ್ವತಮ್ಮ ರಾಜಕುಮಾರ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular