ಜಾತ್ಯತೀತ ಜನತಾ ದಳದ ಮುಖಂಡ ಬೆಳ್ಳಿ ಲೋಕೇಶ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ವಿವಿಧ ಹುದ್ದೆಗಳಿಗೆ ರಾಜಿನಾಮೆ ನೀಡಿದ್ದಾರೆ. ಪಕ್ಷ ನನ್ನನ್ನು ನಡೆಸಿಕೊಂಡ ರೀತಿ ಸರಿ ಇಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ತುಮಕೂರು ನಗರ ಘಟಕದ ಅಧ್ಯಕ್ಷ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲೆಯ ಸಂಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದೆ. ಈ ಎಲ್ಲಾ ಹುದ್ದೆಗಳಿಗೆ ರಾಜಿನಾಮೆ ನೀಡಿದ್ದೇನೆ. ಪಕ್ಷದ ಮುಖಂಡರು ನನ್ನನ್ನು ಯಾವುದೇ ಕಾರ್ಯಕ್ರಮಗಳನ್ನು ರೂಪಸಲು ಕರೆಯಲೇ ಇಲ್ಲ ಎಂದು ದೂರಿದ್ದಾರೆ.
ಕಳೆದ ಮೂರು ತಿಂಗಳುಗಳಿಂದ ನನ್ನ ಹಾಗೂ ನನ್ನ ಬೆಂಬಲಿಗರನ್ನು ಕರೆಯದೆ ನಮ್ಮನ್ನು ಮೂಲೆಗುಂಪು ಮಾಡಿದರು. ಪಕ್ಷದ ಮುಖಂಡರು ಮತ್ತು ಸ್ಥಳೀಯ ಮುಖಂಡರು ನನ್ನ ಸ್ವಕ್ಷೇತ್ರವಾದ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ರೀತಿಯಲ್ಲಿ ಪಕ್ಷದ ಸಂಘಟನೆ ಮತ್ತು ಪಕ್ಷದ ಕಾರ್ಯಕ್ರಮಗಳ ಕುರಿತು ನನ್ನನ್ನು ಸೇರಿದಂತೆ ನನ್ನ ಅಪಾರ ಬೆಂಬಲಿಗರನ್ನು ಪರಿಗಣಿಸದೇ ವಿಷಯ ಪ್ರಸ್ತಾವನೆಯನ್ನು ಮಾಡದೇ ಚುನಾವಣೆ ಸನಿಹದಲ್ಲಿಯೇ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತುಮಕೂರು ಜೆಡಿಎಸ್ ಜಿಲ್ಲಾಧ್ಯಕ್ಷರ ಮೂಲಕ ರಾಜ್ಯಾಧ್ಯಕ್ಷರಿಗೆ ರಾಜಿನಾಮೆ ಪತ್ರ ಬರೆದು ತಿಳಿಸಿದ್ದಾರೆ.