ಸಾಮಾಜಿಕ ನ್ಯಾಯದಡಿ ಪರಿಶಿಷ್ಟ ಜಾತಿಯ ಅಲೆಮಾರಿ ಕೊರಮ-ಕೊರಚ (ಕುಳುವ) ರಾಜ್ಯದ ಏಕೈಕ ಅಭ್ಯರ್ಥಿ ಪಲ್ಲವಿ.ಜಿ ಅವರಿಗೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭೆಯ ಮೀಸಲು ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಅಂತಿಮಗೊಳಿಸುವಂತೆ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಶಿವಾನಂದ ಎಂ. ಭಜಂತ್ರಿ, ರಾಜ್ಯದಲ್ಲಿ 10-12ಲಕ್ಷ ಜನಸಂಖ್ಯೆಯುಳ್ಳ ಕೊರಮ-ಕೊರಚ ಕುಳುವ ಜನಾಂಗ 5ನೇ ಅತಿದೊಡ್ಡ ಸಮುದಾಯವಾಗಿದೆ. ಪಲ್ಲವಿ ಅವರು ದಶಕಗಳಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ತಳಮಟ್ಟದಿಂದ ದುಡಿದ್ದಾರೆ. ಎಲ್ಲಾ ಸಮುದಾಯದ ಶ್ರೇಯೋಭಿವೃದ್ದಿಗೆ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿ ಟಿವಿ ಪೇಸ್ಬುಕ್ ನಲ್ಲಿ ಬರೆದಿದೆ.
ಶಿವಮೊಗ್ಗ ಗ್ರಾಮಾಂತರ ಮೀಸಲು ಮತಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸಂಭವನೀಯ 2ನೇ ಪಟ್ಟಿಯಲ್ಲಿ ಸ್ಥಳೀಯ ಆಕಾಂಕ್ಷಿ ಪಲ್ಲವಿ.ಜಿ ಹೆಸರು ಅಂತಿಮವಾಗಿದ್ದರೂ ಸಹ, ಪರಿಶಿಷ್ಟ ಜಾತಿಯ ಬಲಾಡ್ಯ ಒಳ ಜಾತಿಗಳು ಷಡ್ಯಂತ್ರ ನಡೆಸುತ್ತಿದ್ದು ಇದು ಅತ್ಯಂತ ಖಂಡನೀಯ ಹಾಗೂ ಅಲೆಮಾರಿ ಸಮಯದಾಯಗಳ ದಮನಕಾರಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯ ಮತ್ತು ಕಾಂಗ್ರೆಸ್ ತತ್ವಸಿದ್ಧಾಂತಕ್ಕೆ ಬದ್ಧರಾಗಿರುವವರಿಗೆ ಅವಕಾಶ ಕಲ್ಪಿಸಬೇಕು. ಸಮಾಜದ ಕಟ್ಟಕಡೆಯ ಅವಕಾಶ ವಂಚಿತ ಅಲೆಮಾರಿ ಕುಳುವ ಸಮುದಾಯಕ್ಕೆ ಅನ್ಯಾಯವೆಸಗುವ ಕೆಲಸವನ್ನು ಕಾಂಗ್ರೆಸ್ ಮಾಡಬಾರದು. ಪಲ್ಲವಿಯವರಿಗೆ ಅವಕಾಶ ಕಲ್ಪಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಗೆ ಅವರು ಒತ್ತಾಯಿಸಿದ್ದಾರೆ.