ತುಮಕೂರು ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ಪ್ರಚಾರ ನಡೆಸುತ್ತಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ತುಮಕೂರಿನಲ್ಲಿ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಎಸ್.ಶಿವಣ್ಣ, ರಾಜಿನಾಮೆ ಪತ್ರವನ್ನು ಪಕ್ಷದ ಹಿರಿಯ ಮುಖಂಡರು ಮತ್ತು ರಾಜ್ಯಾಧ್ಯಕ್ಷರಿಗೆ ಕಳಿಸುತ್ತೇನೆ. ಇನ್ನು ಮುಂದೆ ಪಕ್ಷದ ಕಚೇರಿಯ ಬಾಗಿಲನ್ನು ತುಳಿಯಲು ಇಷ್ಟಪಡುವುದಿಲ್ಲ. ಇನ್ನು ಮುಂದೆ ನನಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಇರುವುದಿಲ್ಲ. ನಾಳೆಯ ರಾಜಿನಾಮೆ ಸಲ್ಲಿಸುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದರು.
ನನಗೆ ಯಾವುದೇ ಹೈಕಮಾಂಡ್ ಇಲ್ಲ. ನನ್ನ ಕ್ಷೇತ್ರದ 2 ಲಕ್ಷ ಮತದಾರರೇ ನನ್ನ ಹೈಕಮಾಂಡ್. ನನಗೆ ಬೆಲೆ ಇಲ್ಲದ ಸ್ಥಳದಲ್ಲಿ ನಾನು ಜಂಗ್ಲಿ ಆಗಲು ಇಷ್ಟಪಡುವುದಿಲ್ಲ. ಒಮ್ಮೆ ಕಾಲನ್ನು ಆಚೆ ತೆಗೆದರೆ ಮತ್ತೊಮ್ಮೆ ಯಾವುದೇ ಕಾರಣಕ್ಕೂ ನನ್ನ ಕಾಲನ್ನು ಅಲ್ಲಿಗೆ ಇಡುವುದಿಲ್ಲ ಎಂದು ಬೇಸರದಲ್ಲೇ ಹೇಳಿದರು.
ಪಕ್ಷವನ್ನು ಹಗಲು ರಾತ್ರಿ ಎನ್ನದೆ ಕಟ್ಟಿ ಬೆಳೆಸಿದೆ. ಎಲ್ಲಿಯೋ ಇದ್ದವರನ್ನು ಕರೆತಂದು ನಮ್ಮನ್ನು ಮೂಲೆಗುಂಪು ಮಾಡಲು ಹೊರಟಿರುವುದನ್ನು ಎಷ್ಟು ದಿನ ಸಹಿಸಿಕೊಂಡಿರಲು ಸಾಧ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪಕ್ಷ ನನ್ನ ಕೈ ಹಿಡಿಯುತ್ತದೆ ಎಂದು ಭಾವಿಸಿದ್ದೆ. ಆದರೆ ಕೈ ಹಿಡಿಯಲಿಲ್ಲ. ಹೀಗಾಗಿ ನನ್ನ ಗೃಹ ಕಚೇರಿಯಲ್ಲಿರುವ ಪಕ್ಷದ ಬಾವುಟ, ಕರಪತ್ರ ಸೇರಿದಂತೆ ಬಿಜೆಪಿಗೆ ಸಂಬಂಧಿಸಿದ ಎಲ್ಲವನ್ನೂ ಹೊರಹಾಕುತ್ತೇನೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಕಟ್ಟಿದವರು ಇಂದು ಬಿಜೆಪಿ ಪಕ್ಷಕ್ಕೆ ಬಂದು ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಸಂಸದ ಬಸವರಾಜು ಮತ್ತು ಶಾಸಕ ಜ್ಯೋತಿಗಣೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
2023ರ ಚುನಾವಣೆ ಸಮೀಪವಾಗುತ್ತಿದೆ. ನಿನ್ನೆ ಬಿಡುಗಡೆಯಾಧ ಪಟ್ಟಿಯಲ್ಲಿ ನನಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಭೆಯನ್ನು ನಡೆಸಿ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕುತ್ತೇನೆ ಎಂದು ಹೇಳಿದರು.