2019ರ ಮಾನಹಾನಿ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಒಂದು ದಿನದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಲೋಕಸಭೆಯ ಸೆಕ್ರೆಟರಿ ಜನರಲ್ ಉತ್ಪಲ್ ಕುಮಾರ್ ಸಿಂಗ್ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ ಸಿ.ಸಿ18712/2019ರಲ್ಲಿ ಸೂರತ್ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿತ್ತು.
ಪರಿಣಾಮ ಕೇರಳದ ವಯನಾಡು ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯ ರಾಹುಲ್ ಗಾಂಧಿ, 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ 8ನೇ ಪರಿಚ್ಛೇದದೊಂದಿಗೆ ಓದಲಾದ ಸಂವಿಧಾನದ 102(1)(ಇ) ವಿಧಿಯ ನಿಬಂಧನೆಗಳ ಪ್ರಕಾರ 23 ಮಾರ್ಚ್ 2023ರಿಂದ ಅವರು ಅಪರಾಧಿ ಎಂದು ಸಾಬೀತಾದ ದಿನಾಂಕದಿಂದ ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ.

ಇದಕ್ಕೂ ಮುನ್ನ ಶುಕ್ರವಾರ ನಡೆದ ಲೋಕಸಭೇ ಅಧಿವೇಶನದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು. ರಾಹುಲ್ ಅವರಿಗೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಹೀಗಾಗಿ ರಾಹುಲ್ ಗಾಂಧಿ ಮಾತನಾಡಲು ಸಾಧ್ಯವಾಗಿರಲಿಲ್ಲ.
ಈಗ ವಿಚಾರಣಾ ನ್ಯಾಯಾಲಯವು ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಿದೆ. ಅವರು 30 ದಿನಗಳಲ್ಲಿ ಮೇಲ್ಮನವಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು. ಮೇಲ್ಮನವಿ ನ್ಯಾಯಾಲಯವು ಅಪರಾಧ ಮತ್ತು ಶಿಕ್ಷೆ ಎರಡಕ್ಕೂ ತಡೆ ನೀಡಿದರೆ ಅನರ್ಹತೆಯನ್ನು ಸಹ ಅಮಾನತುಗೊಳಿಸಲಾಗುತ್ತದೆ ಎಂದು ಸಂವಿಧಾನ ತಜ್ಞ ಪಿಡಿಟಿ ಆಚಾರಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರಸ್ ವರದಿ ಮಾಡಿದೆ.


