ರಾಜಕೀಯ ವಿರೋಧಿಗಳ ವಿರುದ್ಧ ಕೇಂದ್ರ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಅನಿಯಂತ್ರಿತವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದ 14 ವಿರೋಧ ಪಕ್ಷಗಳು ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಈ ಸಂಬಂಧ ಏಪ್ರಿಲ್ 5 ರಂದು ವಿಚಾರಣೆಗೆ ನಡೆಸಲು ಸುಪ್ರೀಂಕೋರ್ಟ್ ಶುಕ್ರವಾರ ಒಪ್ಪಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಪ್ರತಿಪಕ್ಷಗಳಾದ ಡಿಎಂಕೆ, ಆರ್.ಜೆಡಿ, ಭಾರತ್ ರಾಷ್ಟ್ರ ಸಮಿತಿ, ಮತ್ತು ತೃಣಮೂಲ ಕಾಂಗ್ರೆಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮಾನು ಸಿಂಘ್ವಿ ಅವರ ಅಹವಾಲುಗಳನ್ನು ಆಲಿಸಿದ ಕೋರ್ಟ್ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.
ಕೇಂದ್ರೀಯ ತನಿಖಾ ಸಂಸ್ಥೆಗಳಾದ ಕೇಂದ್ರ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಮುಖಂಡರ ವಿರುದ್ಧ ದಾಳಿ ನಡೆಸಲು ಬಳಸಿಕೊಳ್ಳುತ್ತಿದೆ ಎಂದು ನ್ಯಾಯಾಲಯದ ಗಮನ ಸೆಳೆದರು.
ಶೇಕಡ 95ರಷ್ಟು ಪ್ರಕರಣಗಳು ವಿರೋಧ ಪಕ್ಷದ ನಾಯಕರ ವಿರುದ್ಧ ಇವೆ. ನಾನು ಬಂಧನ ಪೂರ್ವ ಮಾರ್ಗಸೂಚಿಗಳನ್ನು ಮತ್ತು ಬಂಧನದ ನಂತರದ ಮಾರ್ಗಸೂಚಿಗಳನ್ನು ಕೇಳುತ್ತೇವೆ ಎಂದು ಸಿಂಘ್ವಿ ಹೇಳಿದರು.
ನಾವು ಅರ್ಜಿಯನ್ನು ಏಪ್ರಿಲ್ 5 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುತ್ತೇವೆ ಎಂದು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಮತ್ತು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠ ಹೇಳಿದೆ.


