ನಮ್ಮ ಪಕ್ಷದ ಬೇರೆಯವರಿಗೂ ಅವಕಾಶ ಸಿಗಬೇಕು ಎಂಬ ದೃಷ್ಟಿಯಿಂದ ಬಿಜೆಪಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ನಾನೇ ರಾಜಿನಾಮೆ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು ಬಿಜೆಪಿಯಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವೀರಶೈವರು ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾಗಬಾರದು ಎಂದು ಹೇಳಿದರು.
ನಮ್ಮ ವಿರೋಧಿಗಳು ವೀರಶೈವರ ಮತಗಳನ್ನು ವಿಭಜಿಸಲು ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ಯಾರೂ ನಂಬಬಾರದು ಎಂದು ತಿಳಿಸಿದರು.
ಸಮಾಜದಲ್ಲಿ ಕಾಂಗ್ರೆಸ್ ಪಕ್ಷ ವಿಷ ಬೀಜ ಬಿತ್ತುತ್ತಿದೆ. ತುರ್ತು ಪರಿಸ್ಥಿತಿ ಜಾರಿಗೆ ತಂದು ಜಯಪ್ರಕಾಶ್ ನಾರಾಯಣ್ ಮತ್ತು ವಾಜಪೇಯಿ ಅವರನ್ನು ಜೈಲಿಗೆ ಹಾಕಿದ ಕಾಂಗ್ರೆಸ್ ಗೆ ಕ್ಷಮೆ ಇಲ್ಲ. ಕಾಂಗ್ರೆಸ್ ಕಾಲ ಮುಗಿಯುತ್ತಾ ಬಂದಿದೆ. ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರ ಮುಂದೆ ಸರಿಸಮವಲ್ಲ ಎಂದು ಹೇಳಿದರು.
ತುಮಕೂರು-ಬೆಳ್ಳಾವಿಯಲ್ಲಿ ವಿಜಯಸಂಕಲ್ಪ ಯಾತ್ರೆ
ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರಮೋದಿ ಒಂದು ದಿನವೂ ರಜೆ ಪಡೆದಿಲ್ಲ. ಅದೇ ರೀತಿ ರಾಜ್ಯದ ಬಿಜೆಪಿ ಕಾರ್ಯಕರ್ತರು ಮುಂದಿನ ಎರಡುವರೆ ತಿಂಗಳ ಕಾಲ ವಿಶ್ರಾಂತಿ ಪಡೆಯದೆ, ಪಕ್ಷದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.