ಮಾರ್ಚ್ 24 ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯ ನಂತರ ಪಂಚಮಸಾಲಿಗಳಿಗೆ 2 ಎ ಮೀಸಲಾತಿ ನೀಡುವ ಬಗ್ಗೆ ಮಾಹಿತಿ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಬಾಗಲಕೋಟೆಯ ಮುಧೋಳದಲ್ಲಿ ಮಾಧ್ಯಮದವರಿಗೆ ಮಾತನಾಡಿ 2 ಎ ಸಮುದಾಯಗಳನ್ನು 3 ಬಿ ಗೆ ಹಾಕುವ ಬಗ್ಗೆ ಯಾವುದೇ ವರದಿ ಇಲ್ಲ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ನೀರಾವರಿ, ಕುಡಿಯುವ ನೀರು, ರೈತರಿಗೆ ಅನುಕೂಲವಾಗುವ ಯೋಜನೆ, ಕೈಗಾರಿಕಾ ಅಭಿವೃದ್ಧಿ ಹಾಗೂ ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಲಾಗಿದೆ ಎಂದರು.
ಹುನಗುಂದ ಮತ್ತು ಮುಧೋಳದಲ್ಲಿ ವಿವಿಧ ಕಟ್ಟಡಗಳ ಉದ್ಘಾಟನೆ ಮಾಡಲಾಗಿದೆ. ಮುದ್ದೇಬಿಹಾಳ ಕ್ಷೇತ್ರದಲ್ಲಿ 1600 ಕೋಟಿ ರೂ.ಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳ ಸರ್ಕಾರದ ನಿರ್ಣಯ, ಬಿಡುಗಡೆ ಮಾಡಿರುವ ಅನುದಾನ ಮತ್ತು ಅನುಷ್ಠಾನದ ಫಲವಾಗಿ ಇದಾಗುತ್ತಿದೆ. ನಮ್ಮ ಕೆಲಸಗಳು ಮಾತನಾಡಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಅವರಿಗೆ 15 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.