ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಕೂಡ ಅಷ್ಟೇ ಮುಖ್ಯ. ನಂಬಿಕೆ ಇಲ್ಲವಾದರೆ ಯಾವುದೇ ಸಂಬಂಧ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ನಿಮ್ಮ ಜೀವನದಲ್ಲಿ ಬದಲಾವಣೆ ತರಲಿದೆ, ಬೆಳಕು ನೀಡಲಿದೆ ಎಂಬ ನಂಬಿಕೆ ಇಟ್ಟಿದ್ದೀರಿ. ನಿಮ್ಮ ಈ ನಂಬಿಕೆ ಉಳಿಸಿಕೊಳ್ಳಲು ನಾವು ಶತ ಪ್ರಯತ್ನ ಮಾಡುತ್ತೇವೆ. ಮಾತು ಕೊಡುವುದಕ್ಕಿಂತ ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ಮಾತನಾಡಿದ ಅವರು, ರಾಜ್ಯದ ಮಹಿಳೆಯರು ಬೆಲೆ ಏರಿಕೆಯಿಂದ ಪ್ರತಿನಿತ್ಯ ಕಷ್ಟಪಡುತ್ತಿದ್ದೀರಿ. ನಿಮ್ಮ ಆದಾಯ ಪಾತಾಳಕ್ಕೆ ಕುಸಿದು, ವೆಚ್ಚ ಡಬಲ್ ಆಗಿವೆ. ಈ ಸಮಯದಲ್ಲಿ ನಿಮ್ಮ ಕಷ್ಟ, ನೋವುಗಳನ್ನು ಆಲಿಸಲು ಪ್ರಜಾಧ್ವನಿ ಯಾತ್ರೆಯಲ್ಲಿ ಇಲ್ಲಿಗೆ ಆಗಮಿಸಿದ್ದೇವೆ ಎಂದರು.
ಜನರ ಕಷ್ಟಕ್ಕೆ ಸ್ಪಂದಿಸಲು, ಅವರಿಗೆ ಪರಿಹಾರ ನೀಡಲು ಕಾಂಗ್ರೆಸ್ ಪಕ್ಷ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಮೊದಲ ಗ್ಯಾರಂಟಿ ಗೃಹಜ್ಯೋತಿ ಮೂಲಕ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಆ ಮೂಲಕ ಪ್ರತಿ ತಿಂಗಳು 1500 ರೂ.ನಂತೆ ವರ್ಷಕ್ಕೆ 18 ಸಾವಿರ ಉಳಿತಾಯ ಮಾಡಬಹುದು ಎಂದು ಹೇಳಿದರು.
ಎರಡನೇ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ಸಿಗಲಿದೆ. ಆ ಮೂಲಕ ವರ್ಷಕ್ಕೆ 24 ಸಾವಿರ ನೀಡಲಾಗುವುದು. ಮೂರನೇ ಗ್ಯಾರಂಟಿ ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಸದಸ್ಯರಿಗೆ ಪ್ರತಿ ತಿಂಗಳು ತಲಾ 10 ಕೆ.ಜಿ ಅಕ್ಕಿ ನೀಡಲಾಗುವುದು. ಯುವನಿಧಿ ಯೋಜನೆ ಮೂಲಕ ನಿರುದ್ಯೋಗ ಪದವೀಧರ ಯುವಕರಿಗೆ 2 ವರ್ಷಗಳ ಕಾಲ ಪ್ರತಿ ತಿಂಗಳು 3 ಸಾವಿರ ನಿರುದ್ಯೋಗ ಭತ್ಯೆ, ಡಿಪ್ಲೋಮಾ ಮಾಡಿರುವ ಯುವಕರಿಗೆ 2 ವರ್ಷಗಳ ಕಾಲ ಪ್ರತಿ ತಿಂಗಳು 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಭರವಸೆ ನೀಡಿದರು.
ನಮ್ಮ ಸರ್ಕಾರ ಹಾಲು ಉತ್ಪಾದಕರಿಗೆ 5 ರೂ ನೀಡಿತ್ತು. ಹಸುಗಳ ಮೇವು ಸೇರಿದಂತೆ ಎಲ್ಲ ವಸ್ತು ಬೆಲೆ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರ ರೈತರ ಏಳಿಗೆಗೆ ಶ್ರಮಿಸಲಿದೆ. ಬಿಜೆಪಿ ಸರ್ಕಾರದಲ್ಲಿ ಎಲ್ಲ ಹಂತದಲ್ಲೂ ಲಂಚ ನೀಡಬೇಕು. ಉದ್ಯೋಗ ನೇಮಕಾತಿ, ಗುತ್ತಿಗೆ ಎಲ್ಲ ಕೆಲಸ ಆಗಬೇಕಾದರೂ ಲಂಚ ನೀಡಬೇಕು. ನಾನು 25 ಸಾವಿರ ಜನರಿಗೆ ಇಂಧನ ಇಲಾಖೆಯಲ್ಲಿ ಕೆಲಸ ನೀಡಿದ್ದೆ. ಒಬ್ಬರಿಂದಲೂ ನಾವು ಲಂಚ ಪಡೆದಿರಲಿಲ್ಲ. ಖಾಸಗಿ ಕ್ಷೇತ್ರದಲ್ಲೂ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಕಾನೂನು ತರುತ್ತೇವೆ ಎಂದು ತಿಳಿಸಿದರು.
ನಾನು ಕುಮಾರಣ್ಣನಿಗೆ ಬೆಂಬಲ ನೀಡಿ ಸಹಾಯ ಮಾಡಿದ್ದೇ ಅಲ್ಲವೇ? ಅವರಿಗೆ ಅಧಿಕಾರ ಕೊಟ್ಟು ಆಗಿದೆ. ಅದನ್ನು ಅವರು ಉಳಿಸಿಕೊಳ್ಳಲಿಲ್ಲ. ಯುಗಾದಿ ಹಬ್ಬ ಹಾಗೂ ರಂಜಾನ್ ತಿಂಗಳು ಆರಂಭವಾಗುವ ಮೂಲಕ ಹೊಸ ವರ್ಷ ಆಗಮಿಸಿದೆ. ಈ ಶುಭ ಸಂದರ್ಭದಲ್ಲಿ ನೀವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಕುಣಿಗಲ್ ನಲ್ಲಿ ಮಂಗಳವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್, ರಾಜ್ಯಸಭೆ ಸದಸ್ಯ ಜಿ ಸಿ ಚಂದ್ರಶೇಖರ್, ಸ್ಥಳೀಯ ಶಾಸಕ ಡಾ. ರಂಗನಾಥ್, ಮಾಜಿ ಸಚಿವೆ ಉಮಾಶ್ರೀ, ಸ್ಥಳೀಯ ನಾಯಕಿ ಅನಸೂಯ ವೈ.ಕೆ. ರಾಮಯ್ಯ, ಡಿಸಿಸಿ ಅಧ್ಯಕ್ಷ ಸೋಮಶೇಖರ್ ಗೌಡ ಭಾಗವಹಿಸಿದ್ದರು.