ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲ್ಲ, ಸಂಸದೆ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದರೂ ನಾನು ಮಂಡ್ಯದಲ್ಲಿ ಸ್ಪರ್ಧಿಸಲ್ಲ. ಮಂಡ್ಯ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸುತ್ತೇನೆ. ನಾನು ನಿಲ್ಲುತ್ತೇನೆ ಅನ್ನೋದು ಬರೀ ಊಹಾಪೋಹ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ನೀಡುತ್ತಿರುವುದು ಗ್ಯಾರಂಟಿ ಕಾರ್ಡ್ ಅಲ್ಲ, ಡೂಪ್ಲಿಕೇಟ್ ಕಾರ್ಡ್. ಹೀಗಾಗಿ ಕಾಂಗ್ರೆಸ್, ಬಿಜೆಪಿ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವುದಿಲ್ಲ. ಟೀಕೆಯಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಕೇವಲ 37 ಶಾಸಕರನ್ನು ಇಟ್ಟುಕೊಂಡೇ ನಾನು ಕೆಲಸ ಮಾಡಿದೆ. ಕಾಂಗ್ರೆಸ್ನ ಎಲ್ಲ ಭಾಗ್ಯಗಳನ್ನು ಮುಂದುವರಿಸಿ ರೈತರ ಸಾಲಮನ್ನಾ ಮಾಡಿದೆ ಎಂದು ತಿಳಿಸಿದರು.
ಈ ಬಿಜೆಪಿ ಸರ್ಕಾರ 2 ಲಕ್ಷದ 35 ಸಾವಿರ ಕುಟುಂಬಕ್ಕೆ ಹಣ ಕೊಟ್ಟಿಲ್ಲ. ಬಿಜೆಪಿ ನಾಯಕರು ಸಮಾವೇಶಕ್ಕೆ ಜನ ಕರೆತರಲು ಡಿಸಿ, ಅಧಿಕಾರಿಗಳಿಗೆ ಜವಾಬ್ದಾರಿ ಕೊಡುತ್ತಾರೆ. ನಾವು ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಮನವಿ ಮಾಡುತ್ತಿದ್ದೇವೆ. ಇದು ಜೆಡಿಎಸ್ ಪಕ್ಷದ ಮನವಿಯಾಗಿದೆ. ಈ ಬಾರಿ ಪಾರದರ್ಶಕ ಚುನಾವಣೆ ಅನುಮಾನ. ಕೇವಲ ಕೆಲವು ಪಕ್ಷಕ್ಕೆ ಮಾತ್ರ ಪಾರದರ್ಶಕತೆ ಮಾಡುತ್ತಾರೆ ಎಂದು ಹೇಳಿದರು.
ನಾನು ಕೊಡುತ್ತಿರುವುದು ಸರ್ಕಾರದ ಆಸ್ತಿ ದ್ವಿಗುಣಗೊಳಿಸುವ ಕಾರ್ಯಕ್ರಮ. ಇವರದ್ದು ಸರ್ಕಾರದ ಆಸ್ತಿ ವೃದ್ದಿ ಮಾಡಲ್ಲ. ಇದು ಚುನಾವಣೆಯಲ್ಲಿ ಮತ ಪಡೆಯುವ ಯೋಜನೆ. ಕಮಿಷನ್ ಪರ್ಸೆಟೇಂಜ್ ಕಡಿಮೆ ಮಾಡಿ ಅವರ ಯೋಜನೆಗೆ ಹಣ ಹೊಂದಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಬಂದಾಗ ಗೊತ್ತಾಗುತ್ತದೆ. ಅಲ್ಲಿಯವರೆಗೂ ಅಂತೆ ಕಂತೆ ಇರುತ್ತದೆ. ನಾನು ಜನತೆ ಬಳಿ ಹೋಗಿ ನೋಡಿದ್ದೇನೆ. ನನಗೆ ಯಾವುದೇ ಆತಂಕ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಯೋಜನೆ ಸಾಧ್ಯವಿಲ್ಲ. ಅವರು ಅಧಿಕಾರಕ್ಕೆ ಬರುವುದಿಲ್ಲ ಅಂತಾ ಗೊತ್ತಿದೆ. ಅವರ ನಿರ್ಧಾರಗಳೇ ಅವರನ್ನು ರಾಜಕೀಯದಿಂದ ನಿವೃತ್ತಿ ಮಾಡುತ್ತವೆ. ಅವರಿಗೆ ಗೊತ್ತು ಅವರಿಗೆ ಅಧಿಕಾರಕ್ಕೆ ಬರುವುದಿಲ್ಲ ಅಂತ, ಅದೇ ಕಾರಣಕ್ಕೆ ಅವರು ರಾಜಕೀಯ ನಿವೃತ್ತಿಯ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.