ಕಳೆದ ಲೋಕಸಭಾ ಚುನಾವಣೆಯ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡರಿಗೆ ತಕ್ಕ ಪಾಠ ಕಲಿಸಿ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು.
ಶಾಸಕ ಡಿ.ಸಿ.ಗೌರಿಶಂಕರ್ ನೇತೃತ್ವದಲ್ಲಿ ಭಾನುವಾರ ಕ್ಷೇತ್ರದ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದ್ದು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಡಿ.ಸಿ.ಗೌರಿಶಂಕರ್ ಮೇಲಿನ ಪ್ರೀತಿ ವಿಶ್ವಾಸದ ಪ್ರತೀಕವಾಗಿ ಕ್ಷೇತ್ರದ ಮೂಲೆಮೂಲೆಯಿಂದ ಹಿರಿಯ ನಾಗರೀಕರು ಮಹಿಳೆಯರು ಹಾಗೂ ಯುವಕರು ಆಗಮಿಸಿದ್ದು, ಈ ಬಾರಿ ಗೌರಿಶಂಕರ್ ರವರ ಗೆಲುವು ನಿಶ್ಚಿತ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿಯವರು ರಾಜ್ಯದ ರೈತರ, ಸಾಮಾನ್ಯ ಜನರ ಅಭ್ಯದಯಕ್ಕಾಗಿ ಪಂಚರತ್ನ ಯೋಜನೆಯನ್ನು ರೂಪಿಸಿ ಈಗಾಗಲೇ 85ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಾ ಪಂಚರತ್ನ ಯೋಜನೆಗಳ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಆಶೀರ್ವಾದ ಮಾಡುವುದರ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಶಾಸಕ ಗೌರಿಶಂಕರ್ ಕಂದಾಯ ಮಂತ್ರಿಗಳಾಗುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಶಾಸಕ ಗೌರಿಶಂಕರ್ ಸಂಸ್ಕಾರವಂತ ಯುವಕ, ಕೋವಿಡ್ ನ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವುದೇ ಶಾಸಕ ಮಾಡಿರದಂತಹ ಜನೋಪಯೋಗಿ ಕೆಲಸವನ್ನು ಮಾಡಿ ಕ್ಷೇತ್ರದ ಜನರ ಮನಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೌರಿಶಂಕರ್ ರವರ ಗೆಲುವು ಕ್ಷೇತ್ರದ ಜನರ ಗೆಲುವು ಎಂದು ತಿಳಿಸಿದರು.
ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ನನ್ನ ಅವಧಿಯಲ್ಲಿ ಕ್ಷೇತ್ರಕ್ಕೆ 2,800ಕೋಟಿ ರೂಗಳ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ವಿಶೇಷವಾಗಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ವೃಷಭಾವತಿ ನೀರನ್ನು ತಾಲ್ಲೂಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ರಾಜ್ಯ ವಕ್ತಾರ ಹಾಲನೂರು ಲೇಪಾಕ್ಷ, ಡಿ.ಸಿ.ವೇಣುಗೋಪಾಲ್, ಜಿ.ಫಾಲನೇತ್ರಯ್ಯ, ಎನ್.ಆರ್.ಹರೀಶ್, ಹಿರೇಹಳ್ಳಿ ಮಹೇಶ್, ಹಾಲನೂರು ಅನಂತ್ ಕುಮಾರ್ ಉಪಸ್ಥಿತರಿದ್ದರು.