ಎಐಸಿಸಿ ನಾಯಕ ರಾಹುಲ್ ಗಾಂಧಿ ಮಾಡಿದ ತಂತ್ರಗಾರಿಕೆಯಿಂದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಒಂದೇ ಸೀಟಲ್ಲಿ ಇಬ್ಬರು ಬೈಟು ಮಾಡಿಕೊಂಡು ಕುಳಿತು ಪ್ರಯಾಣ ಮಾಡುವಂತೆ ಪ್ರಸಂಗ ಬೆಳಗಾವಿಯಲ್ಲಿ ನಡೆಯಿತು.
ಯುವ ಶಕ್ತಿ ಕಾರ್ಯಕ್ರಮ ಉದ್ಘಾಟನೆಗೆ ರಾಹುಲ್ ಗಾಂಧಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದರು. ರಾಹುಲ್ ಗಾಂಧಿ ಬರುತ್ತಿದ್ದಂತೆ ಅವರನ್ನು ಕಾರ್ಯಕ್ರಮ ಸ್ಥಳಕ್ಕೆ ಕರೆದುಕೊಂಡು ಹೋಗಲು ಕಾರೊಂದು ಆಗಮಿಸಿತು.
ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇದ್ದರು. ರಾಹುಲ್ ಗಾಂಧಿ ಒಂದೇ ಕಾರಿನಲ್ಲಿ ನಾಲ್ವರು ಹೋಗೋಣ ಎಂದು ಖರ್ಗೆಯವರಿಗೆ ಹೇಳಿದರು. ಈ ಕುರಿತು ಕೆಲ ಕಾಲ ಮಾತುಕತೆಯೂ ನಡೆಯಿತು.
ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಚಾಲಕನ ಪಕ್ಕದ ಸೀಟಿನಲ್ಲಿ ಕೂರುವಂತೆ ರಾಹುಲ್ ಹೇಳಿದರು. ರಾಹುಲ್ ಗಾಂಧಿ ಕಾರಿನ ಹಿಂಬದಿ ಸೀಟಿನ ಬಲಭಾಗದಲ್ಲಿ ಕುಳಿತರು. ಅಲ್ಲದೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ತಮ್ಮ ಪಕ್ಕದಲ್ಲೇ ಕುಳಿತುಕೊಳ್ಳುವಂತೆ ರಾಹುಲ್ ಹೇಳಿದರು.
ರಾಹುಲ್ ಮಾತನ್ನು ಸಮ್ಮತಿಸಿದ ಡಿ.ಕೆ.ಶಿವಕುಮಾರ್ ರಾಹುಲ್ ಪಕ್ಕದಲ್ಲಿ ಮಧ್ಯದಲ್ಲಿ ಕುಳಿತರು. ಪ್ರತಿಪಕ್ಷ ನಾಯಕ ಕಾರಿನ ಹಿಂಬದಿಯ ಎಡಭಾಗದಲ್ಲಿ ಕುಳಿತರು. ರಾಹುಲ್ ಗಾಂಧಿ ಮಾಡಿದ ತಂತ್ರದಿಂದಾಗಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಂದೇ ಸೀಟಲ್ಲಿ ಬೈಟು ಮಾಢಿಕೊಳ್ಳಬೇಕಾದ ಪ್ರಸಂಗ ಒದಗಿ ಬಂತು.
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರ ನಡುವೆ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ನಡೆಯುತ್ತಿದ್ದು ಚುನಾವಣೆಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅರ್ಧ ಅವಧಿ ಮತ್ತು ಡಿ.ಕೆ.ಶಿವಕುಮಾರ್ ಅರ್ಧ ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳನ್ನು ಹುಟ್ಟು ಹಾಕಿದೆ.
ಹಿಂಬದಿಯ ಎರಡು ಸೀಟುಗಳ ಸ್ಥಳದಲ್ಲಿ ರಾಹುಲ್, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಾರ್ಯಕ್ರಮದ ಸ್ಥಳದವರೆಗೂ ಪ್ರಯಾಣ ಬೆಳೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.