ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ, ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತೆಯರು ತುಮಕೂರಿನ ಭದ್ರಮ್ಮ ಛತ್ರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಖಾಲಿ ಸಿಲಿಂಡರ್ ಹೊತ್ತು ಬಂದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಭದ್ರಮ್ಮ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಹೆಚ್ಚಿಸಿರುವುದನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಗೀತಾ ರಾಜಣ್ಣ, ಪ್ರಧಾನಿ ಮನಮೋಹನ್‌ಸಿಂಗ್ ಕಾಲದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾದರೆ ವೀರಾವೇಷದಿಂದ ಬೀದಿಗಿಳಿಯುತ್ತಿದ್ದ ಬಿಜೆಪಿ ಮಹಿಳಾ ಮಣಿಗಳು, ಈಗ ಗ್ಯಾಸ್ ಸಿಲಿಂಡರ್ ಬೆಲೆ 1100 ದಾಟಿದರು ಬಾಯಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾಸ್ ಬೆಲೆ 450 ರೂಪಾಯಿ ಇದ್ದಾಗ ಸಬ್ಸಿಡಿ ದೊರೆಯುತಿತ್ತು. ಆದರೆ ಇಂದು ಬೆಲೆ 1100 ರೂಪಾಯಿ ಆದರೂ ಸಬ್ಸಿಡಿ ಇಲ್ಲ. ಉಜ್ವಲ ಹೆಸರಿನಲ್ಲಿ ಮನೆ ಮನೆಗೆ ಸಿಲಿಂಡರ್ ವಿತರಿಸಿ, ಇರುವ ಒಲೆಯನ್ನು ಕಿತ್ತುಹಾಕುವಂತೆ ಮಾಡಿದರು. ಇದರಿಂದ ಮಹಿಳೆಯರು ಕಣ್ಣೀರು ಹಾಕುವಂತಾಗಿದೆ. ಹೊಗೆರಹಿತ ಅಡುಗೆ ಎಂಬ ನರೇಂದ್ರಮೋದಿ ಅವರ ಘೋಷಣೆ ಹುಸಿಯಾಗಿದೆ. ನಮ್ಮ ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿ ಹೊಗೆ ಬದಲು ರಕ್ತ ಸುರಿಸುತ್ತಿದ್ದಾರೆ. ಈ ಶಾಪ ಬಿಜೆಪಿ ಪಕ್ಷವನ್ನು ತಟ್ಟದೆ ಬಿಡದು. ಇದರ ಫಲ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಗೀತಾ ರಾಜಣ್ಣ ಹೇಳಿದರು.
ಗ್ಯಾಸ್‌ನ ಜೊತೆಗೆ, ಅಡುಗೆ ಎಣ್ಣೆ, ಇಂಧನ ಬೆಲೆಗಳು ಹೆಚ್ಚಾಗಿವೆ. ಮನೆಯನ್ನು ನಿಭಾಯಿಸಿ, ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳಿಗೆ ಒಂದೆಡೆ ಅಡುಗೆ ಅನಿಲ ಬಿಸಿ, ಇನ್ನೊಂದೆಡೆ ಅಡುಗೆ ಎಣ್ಣೆ ಹೆಚ್ಚಳ ಎರಡು ಕೂಡ ನುಂಗಲಾರದ ತುತ್ತಾಗಿದೆ. ಸರ್ಕಾರ ಕೂಡಲೇ ಗ್ಯಾಸ್‌ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಮಹಿಳೆಯರು ಸೇರಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.
ನೆರೆ, ಬರ, ಕೋರೋನ ಬಂದಾಗ ಬಾರದ ಪ್ರಧಾನಿ ನರೇಂದ್ರ ಮೋದಿ, ಈಗ ಚುನಾವಣೆ ಸಮೀಸುತ್ತಿರುವಾಗ ವಾರಕ್ಕೆ ಎರಡು ಬಾರಿ ರಾಜ್ಯಕ್ಕೆ ಬಂದು ಕೈ ಬೀಸಿ ಹೋಗುತ್ತಿದ್ದಾರೆ. 2019ರಲ್ಲಿ ನೆರೆಯಿಂದ ಸಂತ್ರಸ್ಥರಾದವರಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಕಿಸಾನ್ ಸನ್ಮಾನ ಹೆಸರಿನಲ್ಲಿ ರೈತರ ಮೂಗಿಗೆ ತುಪ್ಪ ಸವರಿ, ಮರಳು ಮಾಡುವ ಕೆಲಸ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.