ಹಳ್ಳಿಗೆ ಸಂಪರ್ಕಿಸುವ ರಸ್ತೆಗಳು ಹದಗೆಟ್ಟಿವೆ. ಓಡಾಡಲು ತುಂಬ ತೊಂದರೆಯಾಗಿದೆ. ರಸ್ತೆಗಳನ್ನು ದುರಸ್ತಿ ಮಾಡದೇ ಇರುವುದರಿಂದ ಸಮಸ್ಯೆಯಾಗಿದೆ. ಕೂಡಲೇ ರಸ್ತೆಗಳನ್ನು ರಿಪೇರಿ ಮಾಡಿಸಿ ಎಂದು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ನೀರುಕಲ್ಲು ಗ್ರಾಮಸ್ಥರು ಶಾಸಕ ಬಿ.ವೀರಭದ್ರಯನ್ನು ಅವರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ನೀರುಕಲ್ಲು ಗ್ರಾಮಕ್ಕೆ ಭೇಟಿ ನೀಡಿದ ಶಾಸಕರನ್ನು ಪ್ರಶ್ನಿಸಿದ ಗ್ರಾಮಸ್ಥರು ನೀವು ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಗ್ರಾಮದ ಶಾಲೆಯನ್ನು ಕೊಳಚೆಯಲ್ಲಿ ಕಟ್ಟಲಾಗಿದೆ. ಚರಂಡಿಗಳು ಕೊಳೆತು ನಾರುತ್ತಿವೆ. ರಸ್ತೆಗಳು ಗುಂಡಿ ಗುದ್ರಗಳಿಂದ ತುಂಬಿವೆ ಎಂದು ಕೇಳಿದ್ದಾರೆ.
ಅದಕ್ಕೆ ಶಾಸಕರು ಆ ಯುವಕರಿಗೆ ಎಲ್ಲಾ ಕಡೆಯೂ ಅಭಿವೃದ್ಧಿ ಮಾಡಿಸಲು ಸಾಧ್ಯವಿಲ್ಲ ಎಂದು ಉತ್ತರ ನೀಡುತ್ತಾರೆ. ಇದಕ್ಕೆ ಯುವಕರು ಶಾಸಕರನ್ನು ತಡೆದು ನಿಲ್ಲಿಸಿ ಹಾಗಾದರೆ ಅಭಿವೃದ್ಧಿ ಎಲ್ಲಿ ಮಾಡಿಸಿದ್ದೀರ ಎಂದು ಪ್ರಶ್ನಿಸುತ್ತಾರೆ. ಇದರಿಂದ ಕುಪಿತರಾದ ಶಾಸಕ ವೀರಭದ್ರಯ್ಯ ಯುವಕರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ಅಲ್ಲಿಂದ ಹೋಗುತ್ತಾರೆ.
ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದೆ. ಹೀಗಿರುವಾಗಲೇ ಶಾಸಕರನ್ನು ನೀರಕಲ್ಲು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವುದು ವೀರಭದ್ರಯ್ಯನವರಿಗೆ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.