ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಕಚೇರಿ ಹಾಗೂ ನಿವಾಸದಲ್ಲಿ ಸುಮಾರು 8 ಕೋಟಿಯಷ್ಟು ಹಣ ಸಿಕ್ಕಿದೆ. ಈ ಪ್ರಕರಣದಲ್ಲಿ ಶಾಸಕರಿಗೆ ಒಂದೇ ದಿನದಲ್ಲಿ ಜಾಮೀನು ಸಿಕ್ಕಿರುವುದಕ್ಕೆ ವಕೀಲರ ಸಂಘದವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಸಂಬಂಧ ವಕೀಲರ ಸಂಘದವರು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಚಂದ್ರಚೂಡ ಅವರಿಗೆ ಪತ್ರ ಬರೆದು ಈ ರೀತಿ ಒಂದೇ ದಿನದಲ್ಲಿ ಜಾಮೀನು ನೀಡಿರುವುದು ಆತಂಕಕಾರಿ ವಿಚಾರ. ಇದರಿಂದ ಜನಸಾಮಾನ್ಯರು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಶಾಸಕರನ್ನು ವಿಐಪಿಯಂತೆ ನೋಡುವ ಬದಲು ಸಾಮಾನ್ಯರಂತೆ ಕಾಣುವಂತೆ ವಕೀಲರು ತಿಳಿಸಿದ್ದಾರೆ ಎಂದರು.
ಸರ್ಕಾರ ಹಾಗೂ ಸರ್ಕಾರಿ ವಕೀಲರ ಬೆಂಬಲ ಇಲ್ಲವಾದರೆ ಕೇವಲ ಒಂದೇ ದಿನದಲ್ಲಿ ಜಾಮೀನು ಸಿಗಲು ಹೇಗೆ ಸಾಧ್ಯ? ಅದೇ ಬೇರೆ ಪಕ್ಷದವರಿಗೆ ಇಂತಹ ಪರ್ಕರಣದಲ್ಲಿ 2-3 ತಿಂಗಳಾದರೂ ಜಾಮೀನು ಸಿಗುವುದಿಲ್ಲ. ಸರ್ಕಾರ ಪರ ವಕೀಲರು ಜಾಮೀನು ನೀಡಲೇಬಾರದು ಎಂದು ವಾದ ಕೂಡ ಮಾಡುತ್ತಾರೆ. ಆದರೆ ಇಲ್ಲಿ ಒಂದೇ ದಿನಕ್ಕೆ ಜಾಮೀನು ಕೊಡಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಮತ್ತೊಂದು ಮುಖವಾಡ ಕಳಚಿದೆ. ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಭ್ರಷ್ಟಾಚಾರಗಳು ಬೆಳಕಿಗೆ ಬಂದಿದ್ದು, ಪಿಎಸ್ಐ ಹಗರಣ, ಸಹಾಯಕ ಪ್ರಾಧ್ಯಪಕರು, ಇಂಜಿನಿಯರ್ ನೇಮಕಾತಿ ಸೇರಿದಂತೆ ಅನೇಕ ನೇಮಕಾತಿ ಹಗರಣ ನಡೆದಿವೆ. ಈ ಬಗ್ಗೆ ವಿರೋಧ ಪಕ್ಷಗಳ ಹೇಳುವುದು ಮಾತ್ರವಲ್ಲದೇ ಮಾಧ್ಯಮಗಳಲ್ಲಿ ಹೇಳಲಾಗಿತ್ತು. ಇಷ್ಟಾದರೂ ಬಿಜೆಪಿ ಸರ್ಕಾರ ಸಾಕ್ಷಿ ಕೊಡಿ ಎನ್ನುತ್ತಿದೆ. ಆದರೆ ಈಗ ಬಿಜೆಪಿ ಶಾಸಕರು ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ ಎಂದರು.
ನಾನು ಮನೆಯಲ್ಲೇ ಇದ್ದೆ ಎಲ್ಲೂ ಹೋಗಿಲ್ಲ ಎಂದು ಶಾಸಕರು ಹೇಳಿದ್ದು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟು ನಿಷ್ಕ್ರಿಯವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಇವರು ಪೊಲೀಸ್ ಇಲಾಖೆ ನಿಷ್ಕ್ರಿಯ ಮಾಡಿದ್ದಾರೆ ಎಂದು ಆರೋಪಿಸಿದರು.