Monday, September 16, 2024
Google search engine
Homeಮುಖಪುಟಮಹಿಳೆ ಹಣೆಗೆ ಕುಂಕುಮ ಇಟ್ಟಿಲ್ಲವೆಂದು ದೌರ್ಜನ್ಯ - ಸಂಸದ ಮುನಿಸ್ವಾಮಿ ನಡವಳಿಕೆಗೆ ಸಾಹಿತಿ, ಮಹಿಳಾ ಸಂಘಟನೆಗಳ...

ಮಹಿಳೆ ಹಣೆಗೆ ಕುಂಕುಮ ಇಟ್ಟಿಲ್ಲವೆಂದು ದೌರ್ಜನ್ಯ – ಸಂಸದ ಮುನಿಸ್ವಾಮಿ ನಡವಳಿಕೆಗೆ ಸಾಹಿತಿ, ಮಹಿಳಾ ಸಂಘಟನೆಗಳ ಆಕ್ರೋಶ

ಕೋಲಾರದಲ್ಲಿ ಸುಜಾತ ಎಂಬ ಮಹಿಳೆಗೆ ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲ, ನಿನಗೆ ಗಂಡ ಇದಾನೇನಮ್ಮ ಎಂದು ದೌರ್ಜನ್ಯ ಎಸಗಿರುವ ಸಂಸದ ವಿ.ಮುನಿಸ್ವಾಮಿ ಅವರ ಹೇಳಿಕೆಗೆ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಹಿಳಾ ದಿನಾಚರಣೆಯ ದಿನವೇ ಸಂಸದರು ಬಾಯಿಗೆ ಬಂದಂತೆ ಮಹಿಳೆಯನ್ನು ಅಪಮಾನಿಸಿರುವುದು ಸಾಹಿತಿಗಳು, ಪ್ರಗತಿಪರರ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವಿಮರ್ಶಕ ರಹಮತ್ ತರೀಕೆರೆ ಅವರು, “ನಮ್ಮ‌ ಸಮಾಜದಲ್ಲಿ ಮಹಿಳೆಯರನ್ನು ತುಚ್ಛೀಕರಿಸಿ ಮಾತಾಡುವವರನ್ನು ಗಮನಿಸಿ. ಅವರು ಸಾಮಾನ್ಯವಾಗಿ ಧರ್ಮದ ಮತ್ತು ಜಾತಿಯ ಹೆಸರಲ್ಲಿ ಕೂಡ ದ್ವೇಷ ರೂಢಿಸಿಕೊಂಡಿರುತ್ತಾರೆ. ಅವರಿಗೆ ಅಧಿಕಾರ ಸಿಕ್ಕರೆ ಅದು ಉತ್ತುಂಗಕ್ಕೇರುತ್ತದೆ. ಮಹಿಳೆ-ಜಾತಿ-ಧರ್ಮಗಳ ನೆಲೆಯ ಅಸಹನೆ, ಒಂದು ತ್ರಿವಳಿ ಕಾಯಿಲೆ. ಸಂವೇದನರಾಹಿತ್ಯ ಎನ್ನುವುದು ವ್ಯಕ್ತಿಯಲ್ಲಾಗಲಿ ಸಿದ್ಧಾಂತದಲ್ಲಾಗಲಿ, ಒಂದು ವಿಷಯಕ್ಕೆ ಸೀಮಿತವಾಗಿರುವುದಿಲ್ಲ. ಎಂತಲೇ ಅವುಗಳ ಪ್ರತಿರೋಧ ಕೂಡ ಕೂಡುಪ್ರಜ್ಞೆಯಿಂದ ಕೂಡಿರುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.

ಹಿರಿಯ ಸಾಹಿತಿ ಪುರುಷೋತ್ತಮ ಬಿಳಿಮಲೆಯರು, ಮುನಿಸ್ವಾಮಿ ಅವರ ನಡವಳಿಕೆಯನ್ನು ಖಂಡಿಸಿದ್ದಾರೆ, ಅಯ್ಯಾ ಮುನಿಸ್ವಾಮೀ, ಬಡ ಮಹಿಳೆಯರ ಕುಂಕುಮ ಬೆವರಲ್ಲಿ ಕರಗಿ ಹೋಗುತ್ತೆ. ಕುಂಕುಮ ತರಲು ಮತ್ತೆ ಗಂಡನಿಗೆ ಹೇಳಬೇಕು, ನಿನ್ನ ಕುಂಕುಮ ನಿನ್ನ ಹಣೆಯಲಿ ಭದ್ರವಾಗಿರಲಿ, ಕಂಡ ಕಂಡವರಿಗೆಲ್ಲ ನಾಮ ಹಾಕಲು ಬೇಕಾಗಬಹುದು ನಿನಗೆ, ದುಡಿವ ಮಹಿಳೆಯ ಬಳೆಗಳು ಕೆಲಸದ ನಡುವೆ ಒಡೆದು ಚೂರಾಗುತ್ತವೆ. ಮತ್ತೆ ಕೊಳ್ಳಲು ಊರ ಜಾತ್ರೆಗೆ ಕಾಯಬೇಕು. ಹಬ್ಬದಲಿ ಬಳೆಮಾರುವನಿಗೆ ತಡೆ ಒಡ್ಡಲಾಗಿದೆಯಂತೆ, ಈಗ ನಿನ್ನ ಬಳೆಗಳ ನೀನೇ ಇಟ್ಟುಕೋ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಜಾತಿ ಮತಗಳ ಹೆಸರಿನಲಿ ಜನಗಳಿಗೆ ತೊಡಿಸಲು ಬೇಕಾಗಬಹುದು ನಿನಗೆ, ತಾಯಂದಿರ ಹೊಟ್ಟೆ ಬೆನ್ನಿಗಂಟಿದ್ದು ನಿನಗೆ ಕಾಣಲಿಲ್ಲ, ಎಣ್ಣೆಯಿಲ್ಲದೆ ಅವರ ನೆತ್ತಿ ಒಣಗಿದ್ದು ನಿನಗೆ ಗೊತ್ತಿಲ್ಲ, ಗುಡಿಸಲುಗಳು ಸೋರುತ್ತಿರುವುದ ನೀನು ನೋಡಲಿಲ್ಲ, ಮಕ್ಕಳು ಶಾಲೆಕಾಣದ ಬಗೆಗೆ ನಿನಗೆ ಅರಿವು ಮೂಡಲಿಲ್ಲ. ವಯಸಾದರೂ ನಿನಗೆ ತಾಯಿಯ ಮುಖ ದರ್ಶನವಾಗಲೇ ಇಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧ್ಯಾಪಕಿ ಕೋಮಲ ಕಲ್ಲೂಡಿ ಫೇಸ್ಬುಕ್ ನಲ್ಲಿ ಬರೆದಿದ್ದು ‘ನಾವು ಮಹಿಳೆಯರು ಬೊಟ್ಟು ಕುಂಕುಮ ಇಟ್ಕೊಳೋದು ಬಿಡೋದು ನಮ್ ಇಷ್ಟ ನಿಂಗ್ಯಾಕ್ ಇವೆಲ್ಲ..??ನಿನ್ ಕೆಲ್ಸ ಸಂಸದನಾಗಿ ಏನ್ ಮಾಡ್ಬೇಕೊ ಮಾಡೋದ್ಬಿಟ್ಟು ಹೆಂಗಸರ ಹಣೆ ಕೈ ಕಾಲ್ಬೆರಳು ಕಡೆ ಯಾಕ್ ನೋಡೋದು.. ನಿನ್ನಿಷ್ಟಾನ ಮಹಿಳೆಯರ ಮೇಲೆ ಹೇರೋದ್ಯಾಕೆ..?? ಅಲ್ಲಿದ್ದ ಮಹಿಳೆಯರು ನಿಂಗ್ಯಾಕಯ್ಯ ಅವೆಲ್ಲ ಅಂತ ಅಲ್ಲೇ ತಿರುಗ್ಸಿ ಕೇಳಿದ್ರೆ ಮಕ ಎಲ್ಲಿಟ್ಕೊಳ್ತಿದ್ದೆ??ಕಾಮನ್ಸೆನ್ಸ್ ಬೇಡ್ವಾ ಅಷ್ಟೂ ಹೋಗ್ಲಿ ಕೇಳೋ ಮಾತಾ ಅದು?? ಎಂದು ಟೀಕಿಸಿದ್ದಾರೆ.

ಮಹಿಳಾ ದಿನದಂದು ಕೋಲಾರದ ಸಂಸದರು ಕುಂಕುಮವಿಡದ ಸುಜಾತಳಿಗೆ ಬೆದರಿಕೆ ಹಾಕಿರುವುದು ಅಜ್ಞಾನದ, ಸ್ತ್ರೀದ್ವೇಷದ ನಡೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಕುಂಕುಮ ಮದುವೆಯಾದ ಮೇಲೆ ಬರುವುದಲ್ಲ. ಅದೊಂದು ಅಲಂಕಾರ. ಮದುವೆಯಾದವರೂ, ಆಗದಿದ್ದವರೂ; ಹೆಣ್ಣುಗಳೂ ಗಂಡುಗಳೂ ತಮಗಿಷ್ಟದ ಆಕಾರ, ಬಣ್ಣಗಳ ಬೊಟ್ಟಿಡುತ್ತಾರೆ. ಅದು ಸಂಪೂರ್ಣ ಅವರವರ ಆಯ್ಕೆಗೆ ಬಿಟ್ಟದ್ದು. ಅದು ಅವರ ಹಕ್ಕು ಎಂದು ಒಕ್ಕೂಟ ಹೇಳಿದೆ.

ಇನ್ನೊಂದೆಡೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಹಿಳಾ ಲೇಖಕರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡದೇ ಇದ್ದುದಕ್ಕೆ ಪ್ರಶ್ನೆ ಮಾಡಿದ್ದ ನಿರ್ಮಲಾ ಎಲಿಗಾರ್ ಅವರ ಸದಸ್ಯತ್ಚವನ್ನು ಕ.ಸಾಪ. ಅಧ್ಯಕ್ಷರು ರದ್ದುಗೊಳಿಸಿದ್ದಾರೆ. ಇವೆರೆಡೂ ಮಹಿಳಾ ದೌರ್ಜನ್ಯದ ಬೀಜರೂಪಿ ಮನಃಸ್ಥಿತಿಯಾಗಿದೆ. ಸರ್ವಸಮಾನತೆ ಪ್ರತಿಪಾದಿಸುವ ಸಂವಿಧಾನಕ್ಕೆ ವಿರೋಧಿಯಾಗಿದೆ ಎಂದು ಒಕ್ಕೂಟ ಖಂಡಿಸಿದೆ.

ಜನಪ್ರತಿನಿಧಿಗಳು ತಾವು ಜನಸೇವಕರೇ ಹೊರತು ಸರ್ವಾಧಿಕಾರಿಗಳಲ್ಲ ಎಂದರಿತು ಮೊದಲು ಸಂವಿಧಾನವನ್ನು, ಬಾಬಾಸಾಹೇಬರನ್ನು ಸರಿಯಾಗಿ ಓದಿಕೊಳ್ಳಲಿ. ತಕ್ಷಣವೇ ಸಮಾಜದ ಕ್ಷಮೆ ಕೋರಲಿ. ಇಲ್ಲದಿದ್ದಲ್ಲಿ ಸಮತೆಯನ್ನು ಬಯಸುವ ಸ್ತ್ರೀಪುರುಷರೆಲ್ಲರೂ ತಕ್ಕಪಾಠ ಕಲಿಸುತ್ತಾರೆನ್ನುವುದನ್ನು ಮರೆಯದಿರಲಿ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular