ಡಾ.ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ ಕೊಡಮಾಡುವ ರಾಜಲಕ್ಷ್ಮಿ ಬರಗೂರು ಪ್ರಶಸ್ತಿಗೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಭಾಜನರಾಗಿದ್ದಾರೆ.
ಲೇಖಕಿಯಾಗಿ ಹಲವು ಕೃತಿಗಳನ್ನು ಬರೆದಿರುವ ಬಾ.ಹ.ರಮಾಕುಮಾರಿ ಕರ್ನಾಟಕ ಲೇಖಕಿಯ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ತುಮಕೂರಿನಲ್ಲಿ ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಪ್ರಸ್ತುತ ಜಿಲ್ಲಾ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಾ.ಹ.ರಮಾಕುಮಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅನಾವರಣ, ಕಳೆದು ಹೋಗಿದ್ದಾನೆ, ಅನಾಮಿಕ ಹಕ್ಕಿಯ ಸ್ವಗತ, ನಕ್ಕಾವು ಚುಕ್ಕಿ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಧಗಧಗಿಸುವ ಆತ್ಮಗಳು, ಕನಸಿನಾಳದ ಕಣ್ಣು, ಮಹಿಳೆಯರ ಸ್ಥಾನಮಾನ ಮತ್ತು ಸಂಘಟನೆ ಲೇಖನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ.
ಅಕ್ಕಮಹಾದೇವಿ, ಅಮ್ಮುಗೆ ರಾಯಮ್ಮ-ದೇವಯ್ಯ, ರಾಯಸದ ಮಂಚಣ್ಣ-ರಾಯಮ್ಮ ವ್ಯಕ್ತಿ ಚಿತ್ರಣಗಳು, ಹೀಗೊಂದು ಪ್ರೇಮ ಕಥೆ ಕಥಾ ಸಂಕಲವನ್ನು ಬರೆದಿದ್ದಾರೆ.
ಓದುವ ವಯಸ್ಸಿನಲ್ಲಿ ದುಡಿಮೆ ಯಾಕೆ, ದತ್ತು ತೆಗೆದುಕೊಳ್ಳುವುದು ಹೇಗೆ, ವೈದ್ಯಕೀಯ ಗರ್ಭಪಾತ, ರಂಗಾಪುರದ ಹುಡುಗರು, ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳ, ಜನಸಾಮಾನ್ಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ನವಸಾಕ್ಷರ ಸಾಹಿತ್ಯವನ್ನು ರಚಿಸಿದ್ದಾರೆ.
ಬಾಣಸಂದ್ರದ ಬೆಳ್ಳಿಕಿರಣ, ಸುವರ್ಣಸಿರಿ, ತುಮಕೂರು ಜಿಲ್ಲೆಯ ಸಾಹಿತಿಗಳ ಮಾಹಿತಿ ಕೋಶ ಸೇರಿದಂತೆ ಒಟ್ಟು 22 ಕೃತಿಗಳನ್ನು ಬರೆದಿದ್ದಾರೆ.