ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಆಡಳಿತದಲ್ಲಿ ಕಮಿಷನ್ ಪ್ರಮಾಣ ಮಾತ್ರ ಡಬಲ್ ಆಗಿದ್ದು, ಜನಪರ ಹಾಗೂ ಶೂನ್ಯ ಪರ್ಸೆಂಟ್ ಆಡಳಿತಕ್ಕಾಗಿ ಆಮ್ ಆದ್ಮಿ ಪಾರ್ಟಿಯ ಹೊಸ ಎಂಜಿನ್ ಸರ್ಕಾರವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ನಡೆದ ಆಮ್ ಆದ್ಮಿ ಪಾರ್ಟಿಯ ಬೃಹತ್ ಸಮಾವೇಶದಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ಅರವಿಂದ್ ಕೇಜ್ರಿವಾಲ್, ನಮಸ್ಕಾರ ಕರ್ನಾಟಕ. ಕರ್ನಾಟಕದ ಹೃದಯ ಭಾಗ ದಾವಣಗೆರೆ. ಇಲ್ಲಿ ಬಂದಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ಕನ್ನಡದಲ್ಲೇ ಹೇಳಿದರು.
ಕರ್ನಾಟಕದ ಸರ್ಕಾರವು 40ರಷ್ಟು ಸರ್ಕಾರವೆಂಬ ಮಾತು ಪ್ರಚಲಿತದಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ 40ರಷ್ಟು ಕಮಿಷನ್ ನೀಡದೇ ಸರ್ಕಾರದ ಯಾವುದೇ ಗುತ್ತಿಗೆ ಕಾಮಗಾರಿ ನಡೆಯುತ್ತಿಲ್ಲವೆಂದು ಗುತ್ತಿಗೆದಾರರ ಸಂಘವೇ ಹೇಳುತ್ತಿದೆ. ಆದರೆ ಬಿಜೆಪಿಯ ಅಮಿತ್ ಶಾರವರು ಇಲ್ಲಿಗೆ ಬಂದು ಭ್ರಷ್ಟರಹಿತ ಆಡಳಿತ ನೀಡುವುದಾಗಿ ಹೇಳುತ್ತಿದ್ದಾರೆ. ಇದೇ ಜಿಲ್ಲೆಯ ಹಾಗೂ ಅಮಿತ್ ಶಾರವರ ಪಕ್ಷದ ಶಾಸಕ ಹಾಗೂ ಅವರ ಮಗನ ಬಳಿ ಲೋಕಾಯುಕ್ತ ಅಧಿಕಾರಿಗಳಿಗೆ 8 ಕೋಟಿ ರೂಪಾಯಿ ನಗದು ದೊರೆತಿದೆ. ಶಾಸಕರನ್ನು ಈವರೆಗೂ ಬಂಧಿಸದ ಸರ್ಕಾರಕ್ಕೆ ಪದ್ಮಭೂಷಣ ನೀಡಬೇಕು” ಎಂದು ವ್ಯಂಗ್ಯವಾಡಿದರು.
ದೆಹಲಿ ಸರ್ಕಾರದ ಸಚಿವ ಮನೀಶ್ ಸಿಸೋಡಿಯಾ ಅವರ ಮನೆ, ಕಚೇರಿ, ಬ್ಯಾಂಕ್ ಲಾಕರ್ ಮೇಲೆ ಕೇಂದ್ರ ಸರ್ಕಾರದ ಸಂಸ್ಥೆಗಳು ದಾಳಿ ಮಾಡಲಾಯಿತು. ಅಲ್ಲಿ ಕೇವಲ ಹತ್ತು ಸಾವಿರ ರೂಪಾಯಿ ಹಣ ಸಿಕ್ಕಿತು. ಆದರೆ ಅವರ ಮೇಲೆ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದಾರೆ ಎಂಬ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ. ಭ್ರಷ್ಟಾಚಾರ, ಅತ್ಯಾಚಾರ, ಲಂಚ ಕೇಳುವ, ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವವರು, ಮೋಸ, ವಂಚನೆ ಮಾಡುವವರು ಬಿಜೆಪಿಯಲ್ಲಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರದ ಕಮಿಷನ್ ದಂಧೆಯಿಂದಾಗಿ ಶಾಲೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ಕೂಡ ಆರೋಪಿಸುತ್ತಿವೆ. ಸರ್ಕಾರದಿಂದ ಅನುದಾನ ಪಡೆಯಲು 30ರಷ್ಟು ಕಮಿಷನ್ ನೀಡಬೇಕಾಗಿದೆ ಎಂದು ಹಿಂದೂ ಮಠಗಳು ಆರೋಪಿಸಿವೆ. ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ರಸ್ತೆಗಳನ್ನು ದುರಸ್ತಿ ಹಾಗೂ ನಿರ್ವಹಣೆಗೆ 20,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇತ್ತೀಚೆಗೆ 6000 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆದರೆ ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದಾಗಿ 100ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಾರೆಂದು 34 ಕೋಟಿ ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಿಸಲಾಯಿತು. ಆದರೆ ಕೇವಲ 24 ಗಂಟೆಗಳೊಳಗೆ ರಸ್ತೆಯು ಕುಸಿದು ಗುಂಡಿ ಬಿದ್ದಿತು ಎಂದು ಹೇಳಿದರು.
ಕರ್ನಾಟಕದಲ್ಲಿ ವಿದ್ಯುತ್, ನೀರು, ಆರೋಗ್ಯ, ಗುಣಮಟ್ಟದ ಶಿಕ್ಷಣ, ಮಹಿಳೆಯರಿಗೆ ಸಾರಿಗೆ ಉಚಿತವಾಗಿ ಇಲ್ಲದಿದ್ದರೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಕಳೆದ ಐದು ವರ್ಷಗಳಲ್ಲಿ 3 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದವೆ. ಜನರಿಗೆ ಉಚಿತ ಕೊಡುಗೆ ನೀಡುವ ಬದಲು ಅವರ ತಲೆ ಮೇಲೆ ಸಾಲದ ಹೊರೆ ಹೊರಿಸಿವೆ. ದೆಹಲಿಯಲ್ಲಿ ಇವೆಲ್ಲ ಉಚಿತವಾಗಿದ್ದರೂ ಅಲ್ಲಿನ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಆಮ್ ಆದ್ಮಿ ಪಾರ್ಟಿಯು ಜೀರೋ ಕಮಿಷನ್ ಆಡಳಿತ ನೀಡುತ್ತಿರುವುದರಿಂದ ಇವೆಲ್ಲ ಸಾಧ್ಯವಾಗಿದೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.