Friday, September 20, 2024
Google search engine
Homeಮುಖಪುಟಕವಿ, ಸಾಹಿತಿ ಸಮಾಜಕ್ಕೆ ಋಣಿಯಾಗಿರಬೇಕು - ಸಾಹಿತಿ ಎಸ್.ಗಂಗಾಧರಯ್ಯ

ಕವಿ, ಸಾಹಿತಿ ಸಮಾಜಕ್ಕೆ ಋಣಿಯಾಗಿರಬೇಕು – ಸಾಹಿತಿ ಎಸ್.ಗಂಗಾಧರಯ್ಯ

ದೇಶಿ ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಕೃತಿ ರಚನೆಗೆ ತೊಡಗಬೇಕು. ಹಾಗೆಯೇ ಕೃತಿ ರಚನೆಗೆ ನುಡಿಗಟ್ಟುಗಳನ್ನು ಬಳಸಿಕೊಂಡ ಸಮಾಜದ ಬಗ್ಗೆಯೂ ಋಣಿಯಾಗಿರಬೇಕೆ ಎಂದು ಸಾಹಿತಿ ಎಸ್.ಗಂಗಾಧರಯ್ಯ ಹೇಳಿದ್ದಾರೆ.

ತುಮಕೂರಿನ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಲೇಖಕಿಯರ ಸಂಘ ಮತ್ತು ಸಿರಿವರ ಪ್ರಕಾಶನ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಎಲ್.ಎನ್.ಮುಕುಂದರಾಜ್ ಅವರ ವಿಲೋಮಚರಿತ, ವಿಜಯ ಮೋಹನ್ ಅವರ ಮೇವು ಮತ್ತು ಪ್ರೊ.ಟಿ.ಎನ್.ಜ್ಞಾನೇಶ್ವರ್ ಅವರ ಅರಿವೇ ಗುರು ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಒಬ್ಬ ಕಥೆಗಾರ, ಕಾದಂಬರಿಕಾರ, ಕವಿ ಇದ್ದೇ ಇರುತ್ತಾನೆ. ಅದಕ್ಕೆ ಅಕ್ಷರ ರೂಪ ಕೊಟ್ಟಾಗ ಆತ ಕವಿ, ಕಥೆಗಾರ ಮತ್ತು ಕಾದಂಬರಿಕಾರನಾಗಿ ಹೊರಹೊಮ್ಮುತ್ತಾನೆ. ಕುಂಬಾರ ಮಡಕೆಯನ್ನು ಮಾಡುವಾಗ ತಾದಾತ್ಮ್ಯನಾಗಿ ಇರುತ್ತಾರೆ. ಕವಿಯೂ ಸಾಹಿತ್ಯ ರಚನೆ ಮಾಡುವಾಗ ಆ ತಾದಾತ್ಯ್ಮವನ್ನು ಹೊಂದಿರುತ್ತಾನೆ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಸಮಾಜದಿಂದ ಮೆಟಫರ್ ಗಳನ್ನು ತೆಗೆದುಕೊಂಡು ಕೃತಿ ರಚನೆ ಮಾಡುತ್ತಾನೆ. ನನ್ನದೇ ಎಂಬುದನ್ನು ಬರೆಯಲಾರ. ನನ್ನದೇ ಬರೆಯುತ್ತೇನೆ ಎಂದುಕೊಂಡರೆ ಆತನಲ್ಲಿನ ಲೇಖಕ ಸತ್ತು ಹೋಗಿದ್ದಾನೆ ಎಂದು ಅರ್ಥ. ನಮ್ಮದೇ ಶ್ರೇಷ್ಠ ಎಂದು ತಿಳಿದುಕೊಂಡು ಬೇರೆಯವರ ಬರಹವನ್ನು ಓದದೇ ಹೋದರೆ ಆತ ಮಹಾಮೂರ್ಖನಾಗಿರುತ್ತಾನೆ ಎಂದು ಹೇಳಿದರು.

ಲೇಖಕ ತನ್ನ ಬದ್ದತೆಯನ್ನು ಓರೆಗಲ್ಲಿಗೆ ಹಚ್ಚುವ ಕಾಲಘಟ್ಟದಲ್ಲಿದ್ದಾನೆ. ನಿಜವಾದ ಲೇಖಕ ಯಾವಾಗಲೂ ಪ್ರಭುತ್ವವನ್ನು ಎದುರು ಹಾಕಿಕೊಂಡು ಬರೆಯುತ್ತಾನೆ. ತನ್ನೊಳಗಿನ ಲೇಖಕನನ್ನು ಪರಿಶೋಧನೆಗೆ ಹಚ್ಚಬೇಕು. ಇದಾಗದಿದ್ದರೆ ಆತ ಲೇಖಕನಾಗಿಯೂ ಪ್ರಯೋಜನವಿಲ್ಲ. ಆತನಿಂದ ಸಮಾಜಕ್ಕೇನೂ ಕೊಡುಗೆ ಇಲ್ಲ ಎಂದರು.

ಪಠ್ಯಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ಬಹುತೇಕ ಲೇಖಕರು ಧ್ವನಿ ಎತ್ತಲಿಲ್ಲ. ಕೇವಲ ಬೆರಳೆಣಿಕೆಯ ಲೇಖಕರು ಮಾತ್ರ ದನಿ ಎತ್ತಿದರು. ಆದರೆ ಬಹುತೇಕ ಲೇಖಕರು ಇದರ ಬಗ್ಗೆ ಧ್ವನಿ ಎತ್ತಿದರೆ ಪ್ರಶಸ್ತಿ ಬರುವುದಿಲ್ಲ. ಅಕಾಡೆಮಿಗಳಿಗೆ ನೇಮಕ ಮಾಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಬಹುತೇಕ ಲೇಖಕರು ಮೌನವಾಗಿ ಇದ್ದರು. ಇದು ಅಪಾಯಕಾರಿ ಬೆಳವಣಿಗೆ ಎಂದು ತಿಳಿಸಿದರು.

ಕಾರ‍್ಯಕ್ರಮದಲ್ಲಿ ಕೃತಿಕಾರರಾದ ಎಲ್.ಎನ್.ಮುಕುಂದರಾಜ್, ವಿಜಯ ಮೋಹನ್, ಪ್ರೊ.ಟಿ.ಎನ್. ಜ್ಞಾನೇಶ್ವರ್, ಪತ್ರಕರ್ತ ಉಗಮ ಶ್ರೀನಿವಾಸ್, ಚಿಂತಕ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ, ಹಿರಿಯ ಲೇಖಕ ಡಾ.ರಾಜಶೇಖರ್ ಮಠಪತಿ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಉಪಸ್ಥಿತರಿದ್ದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular