Thursday, September 19, 2024
Google search engine
Homeಮುಖಪುಟದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವದಲ್ಲಿ ಭಾಗಿಯಾಗದಿರಲು ಪುರುಷೋತ್ತಮ ಬಿಳಿಮಲೆ ನಿರ್ಧಾರ

ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವದಲ್ಲಿ ಭಾಗಿಯಾಗದಿರಲು ಪುರುಷೋತ್ತಮ ಬಿಳಿಮಲೆ ನಿರ್ಧಾರ

ಶಿಕ್ಷಣ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ತಮ್ಮ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ತಮ್ಮದೇ ಆದ ನಿಯಮಗಳನ್ನು ಹೊಂದಿರುತ್ತವೆ. ಜನರಿಂದ ನೇರವಾಗಿ ಆಯ್ಕೆಗೊಂಡ ಪ್ರತಿನಿಧಿಗಳು ಅದರಲ್ಲಿ ಕೆಲಸ ಮಾಡುತ್ತಾರೆ. ಇಂಥ ಸಂಘಸಂಸ್ಥೆಗಳು ಪಕ್ಷ ರಾಜಕಾರಣವನ್ನು ಮೀರಿ ತಮ್ಮ ಉದ್ದೇಶ ಸಾಧನೆಗಾಗಿ ಕೆಲಸ ಮಾಡಬೇಕೆಂದು ಬಯಸುವವರಲ್ಲಿ ನಾನೂ ಒಬ್ಬ. ಹೀಗೆ ಹೇಳಿದಾಗ ಜನರಿಂದ ಆಯ್ಕೆಯಾದ ರಾಜಕಾರಣಿಗಳಿಗೆ ಇಲ್ಲಿ ಪ್ರವೇಶವೇ ಇರಬಾರದೆಂದೇನೂ ಅರ್ಥವಲ್ಲ. ಖಂಡಿತಾ ಅವರು ಬರಬೇಕು. ಆದರೆ ಅವರ ಬರುವಿಕೆ ಸಂಘ ಸಂಸ್ಥೆಗಳ ಸ್ವಾಯತ್ತೆಯನ್ನು ಹರಣಗೊಳಿಸುವಂತಿರಬಾರದು ಅಷ್ಟೆ. ಸಂವೇದನಾಶೀಲ ರಾಜಕಾರಣಿಗಳು ಹಾಗೆ ಮಾಡುವುದನ್ನು ನಾನು ಕಂಡಿದ್ದೇನೆ. ದೆಹಲಿ ಕರ್ನಾಟಕ ಸಂಘಕ್ಕೆ ಬಂದಿದ್ದ ಶ್ರೀ ಎಂ ಪಿ ಪ್ರಕಾಶ್‌ ಅವರು ಈ ಕುರಿತು ನಮಗೆಲ್ಲ ಕಿವಿ ಮಾತು ಹೇಳುತ್ತಾʼ ಕರ್ನಾಟಕ ಸಂಘವು ರಾಜಕೀಯೇತರವಾಗಿಯೇ ಬೆಳೆಯಲಿʼ ಎಂದು ಹಾರೈಸಿದ್ದರು.

ಕರ್ನಾಟಕ ಸಂಘವು ಇದೀಗ ತನ್ನ ೭೫ನೇ ಹುಟ್ಟುಹಬ್ಬವನ್ನು ಅಮೃತ ಸಂಭ್ರಮವಾಗಿ ಆಚರಿಸುತ್ತಿದೆ. ಈ ಸುದೀರ್ಘ ಅವಧಿಯಲ್ಲಿ ಅನೇಕ ಏಳುಬೀಳುಗಳನ್ನು ಕಂಡ ಸಂಘವು ತನ್ನದೇ ಇತಿಮಿತಿಯಲ್ಲಿ ನಾಡು ನುಡಿಗಳಿಗೆ ಸೇವೆ ಸಲ್ಲಿಸುತ್ತಾ ಬಂದಿದೆ. ಪುಸ್ತಕಗಳನ್ನು ಪ್ರಕಟಿಸಿದೆ. ಅನ್ಯ ಭಾಷಿಕರ ನಡುವೆ ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ನಿರಂತರವಾಗಿ ಶ್ರಮಿಸಿದೆ. ಕನ್ನಡದ ಅತ್ಯಂತ ಮಹತ್ವದ ಲೇಖಕರಾದ ಶಿವರಾಮ ಕಾರಂತ, ಎಚ್ ವೈ ಶಾರದಾಪ್ರಸಾದ್, ಎಂ ಎಸ್ ಸತ್ಯು, ಶಾ ಬಾಲು ರಾವ್, ಕೆ ವಿ ಸುಬ್ಬಣ್ಣ, ಗಿರೀಶ್ ಕಾರ್ನಾಡ್, ಎಂ ಚಿದಾನಂದಮೂರ್ತಿ, ಯು ಆರ್ ಅನಂತಮೂರ್ತಿ, ಯಶವಂತ ಚಿತ್ತಾಲ, ಎಂ ಎಂ ಕಲಬುರ್ಗಿ, ಜಿ ಎಸ್ ಶಿವರುದ್ರಪ್ಪ, ಎಸ್ ಎಲ್ ಭೈರಪ್ಪ, ರಾಘವೇಂದ್ರ ಪಾಟೀಲ,ಕೃಷ್ಣ ಕೊಲ್ಹಾರ ಕುಲಕರ್ಣಿ, ಎಚ್ ಎಸ್ ವೆಂಕಟೇಶಮೂರ್ತಿ, ವೈದೇಹಿ, ಗೀತಾನಾಗಭೂಷಣ, ಸುಕನ್ಯಾ ಕನಾರಳ್ಳಿ, ಬಿ ಎ ವಿವೇಕ ರೈ, ಚನ್ನವೀರ ಕಣವಿ, ಹಂಪ ನಾಗರಾಜಯ್ಯ, ಷ. ಶೆಟ್ಟರ್, ಬೊಳುವಾರು, ಸಿದ್ದಲಿಂಗ ಪಟ್ಟಣಶೆಟ್ಟಿ, ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ, ಮೊದಲಾದ ನೂರಾರು ಲೇಖಕರ ಜೊತೆಗೆ, ಡಾ. ರಾಜಕುಮಾರ್, ಗಂಗೂಬಾಯಿ ಹಾನಗಲ್, ಪಂಡಿತ ವೆಂಕಟೇಶ್ ಕುಮಾರ್, ಮೊದಲಾದ ಕಲಾವಿದರೂ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಕರ್ನಾಟಕದ ಜೊತೆಗಣ ನಮ್ಮ ನೆಲೆ ತಪ್ಪದಂತೆ ನೋಡಿಕೊಂಡಿದ್ದಾರೆ.

ಆದರೆ ಕರ್ನಾಟಕ ಸಂಘವು ಇದುವೇ ಫೆಬ್ರವರಿ 25 ಮತ್ತು 26 2023 ರಂದು ಆಚರಿಸುತ್ತಿರುವ ಅಮೃತ ಮಹೋತ್ಸವ ಆಚರಣೆಯು ಸಂಘದ ಮೂಲ ಉದ್ದೇಶದಿಂದ ಬಹಳ ದೂರ ಸರಿದಿದೆ ಎಂದು ಭಾಸವಾಗುತ್ತಿದೆ. ಅದರ ಕರೆಯೋಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವವರೇ ಶ್ರೀ ಸಿ ಟಿ ರವಿ ಎಂದು ನಮೂದಿಸಲಾಗಿದೆ. ಸಹಜವಾಗಿ ಸಿ ಟಿ ರವಿಯವರು ತಮಗೆ ಬೇಕಾದವರನ್ನು ಕಾರ್ಯಕ್ರಮಕ್ಕೆ ಕರೆದಿದ್ದಾರೆ. ಕನ್ನಡ ಭಾಷೆ , ಸಾಹಿತ್ಯ ಮತ್ತು ಸಂಸ್ಕೃತಿಯ ರಾಷ್ಟ್ರೀಯ ಸಮಾವೇಶವಾಗಬೇಕಾಗಿದ್ದ ಅಮೃತ ಸಂಭ್ರಮವು ರಾಜಕೀಯ ಸಮಾವೇಶವಾಗಿ ಮಾರ್ಪಟ್ಟಿದೆ.

ಕನ್ನಡ ನಾಡು ನುಡಿಗೆ ಸೇವೆಸಲ್ಲಿಸಿದ ಲೇಖಕ, ಕಲಾವಿದರು ದೊಡ್ಡ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಕಾಣುತ್ತಿಲ್ಲ.ಅಲ್ಪ ಸಂಖ್ಯಾಕರನ್ನು ಪೂರ್ತಿ ಕಡೆಗಣಿಸಲಾಗಿದೆ. ದೆಹಲಿಯ ತಾಲ್ಕೊಟರಾ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಬೃಹತ್ ಕಾರ್ಯಕ್ರಮಕ್ಕೆ ಕೋಟ್ಯಂತರ ರೂಪಾಯಿಗಳ ಖರ್ಚು ಇದ್ದು, ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂಬ ಕುರಿತೂ ಸ್ಪಷ್ಟತೆಯಿಲ್ಲ. ಕಾರ್ಯಕಾರೀ ಸಮಿತಿಯ ಕೆಲವು ಸದಸ್ಯರಿಗೂ ಈ ಕುರಿತು ಗೊತ್ತಿಲ್ಲ. ಇಂಥ ಹಲವು ಕಾರಣಗಳಿಂದಾಗಿ ಸಂಘದ ಹಿಂದಿನ ಅಧ್ಯಕ್ಷರುಗಳಾದ ನಾನು, ಡಾ. ವೆಂಕಟಾಚಲ ಹೆಗಡೆ, ಮತ್ತು ವಸಂತ ಶೆಟ್ಟಿ ಬೆಳ್ಳಾರೆಯವರು ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇವೆ.

ಹಿಂದೊಮ್ಮೆ ಸಂಘದ ಮುಖಪತ್ರಿಕೆ ಅಭಿಮತದಲ್ಲಿ ದೆಹಲಿಯ ಹೋರಾಟ ನಿರತ ರೈತರನ್ನು ʼ ದೇಶದ್ರೋಹಿಗಳುʼ ಎಂದು ಕರೆಯಲಾಗಿತ್ತು. ʼ ಇದು ಅಭಿಮತದ ಉದ್ದೇಶಕ್ಕೆ ಹೊರತಾದ ಹೇಳಿಕೆʼ ಎಂದು ನಾನು ವಿನಯದಿಂದಲೇ ಸಂಘಕ್ಕೆ ಬರೆದಿದ್ದೆ. ಅದರೆ ಅದಕ್ಕೆ ಉತ್ತರಿಸುವ ಸೌಜನ್ಯವನ್ನು ಸಂಘ ಇದುವರೆಗೂ ತೋರಿಸಿಲ್ಲ ಎಂಬ ಅಂಶವೇ ಸಂಘದ ಬದಲಾದ ಸ್ವರೂಪವನ್ನು ಹೇಳುತ್ತದೆ.

ಮುಂದೆ ಹೀಗಾಗದಿರಲಿ ಎಂದಷ್ಟೇ ಆಶಿಸುತ್ತೇನೆ.

ಲೇಖಕರು: ಪುರುಷೋತ್ತಮ ಬಿಳಿಮಲೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular