ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂಬ ವದಂತಿಗಳು ಹರಡಿದ್ದು ನಾನು ಬಿಜೆಪಿ ಬಿಟ್ಟು ಯಾವ ಪಕ್ಷಕ್ಕೂ ಹೋಗುವುದಿಲ್ಲ ಎಂದು ತುಮಕೂರು ನಗರ ಕ್ಷೇತ್ರದ ಶಾಸಕ ಜ್ಯೋತಿ ಗಣೇಶ್ ಸ್ಪಷ್ಟಪಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಆಲೋಚನೆ ಇಲ್ಲ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿಯಾಗಿರುತ್ತೇನೆ. ಏಪ್ರಿಲ್ ವರೆಗೆ ಕಾದು ನೋಡಿ. ನನ್ನ ಅಭಿವೃದ್ಧಿ ಪರಿಗಣಿಸಿ ಪಕ್ಷ ಮುಖಂಡರು ನನಗೆ ಟಿಕೆಟ್ ನೀಡಲಿದ್ದಾರೆ ಎಂದು ತಿಳಿಸಿದರು.
ಟಿಕೆಟ್ ನೀಡುವಾಗ ಯಾರು ಗೆಲ್ಲುತ್ತಾರೆ ಎಂಬುದನ್ನು ಸಹ ಪಕ್ಷ ಪರಿಗಣನೆಗೆ ತೆಗೆದುಕೊಳ್ಳಲಿದೆ. 2018ರಲ್ಲಿ ನನಗೆ ಟಿಕೆಟ್ ನೀಡುವಾಗ ಪ್ರತಿರೋಧ ಇದ್ದರೂ ಗೆದ್ದು ಬಂದಿದ್ದೇನೆ ಎಂದು ಟಿಕೆಟ್ ನೀಡುವುದನ್ನು ಸಮರ್ಥಿಸಿಕೊಂಡರು.
ತುಮಕೂರಿನಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು ಮಾರ್ಚ್ 5ರಂದು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸೇರಿದಂತೆ ಹಲವು ಮಂದಿ ಸಚಿವರು ಆಗಮಿಸಲಿದ್ದಾರೆ ಎಂದರು.