ಜೈನ್ ಕಾಲೇಜಿನ ಸಿಎಂಎಸ್ ವಿಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅಪಮಾನಿಸಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ ಜೈನ್ ಕಾಲೇಜಿನ ಮಾನ್ಯತೆಯನ್ನೂ ರದ್ದುಪಡಿಸಬೇಕೆಂಬ ಒತ್ತಾಯವೂ ಕೇಳಿ ಬಂದಿದೆ. ಜೈನ್ ಕಾಲೇಜು ವಿರುದ್ಧ ಟ್ವಿಟ್ಟರ್ ಮತ್ತು ಫೇಸ್ಬುಕ್ ನಲ್ಲಿ ಟ್ರೆಂಡಿಂಗ್ ಆರಂಭವಾಗಿದೆ.
ಸಂಸ್ಕೃತಿ ಚಿಂತಕ ಮತ್ತು ವಿಮರ್ಶಕ ರಹಮತ್ ತರೀಕೆರೆ ಫೇಸುಬುಕ್ ನಲ್ಲಿ ಪ್ರತಿಕ್ರಿಯಿಸಿ ‘ಇದು ಬಹಳ ಕೆಡುಕಿನ ಸಂಗತಿಯಾಗಿದ್ದು. ಖಂಡನಾರ್ಹ. ಸಾಮಾನ್ಯವಾಗಿ ಮತೀಯವಾದ ಮತ್ತು ದಲಿತವಿರೋಧ ಗ್ರಹಿಕೆಗಳು ನಮ್ಮ ಸಮಾಜದಲ್ಲಿ ತಳುಕುಹಾಕಿಕೊಂಡೇ ಇರುತ್ತವೆ ಎಂದು ಹೇಳಿದ್ದಾರೆ.
ಬರಹಗಾರ ಹರ್ಶಕುಮಾರ್ ಕುಗ್ವೆ ಫೇಸ್ಬುಕ್ ನಲ್ಲಿ ಬರೆದಿದ್ದು ‘ಜೈನ್ ಕಾಲೇಜಿನ CMS ವಿಬಾಗದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನಿಸಿ ಕೇಕೆ ಹಾಕಿದ ಪ್ರತಿಯೊಬ್ಬರೂ ದೇಶದ್ರೋಹಿಗಳೇ. ಈಗಲೇ ಇವರ ಮನಸಿನಲ್ಲಿ ಇಶ್ಟು ದ್ವೇಷ, ನಂಜು ತುಂಬಿಕೊಂಡಿರುವಾಗ ಇವರೆಲ್ಲಾ ಮುಂದೆ ಕಂಪನಿಗಳ ಮ್ಯಾನೇಜ್ ಮೆಂಟ್ ವಿಬಾಗಗಳಲ್ಲಿ ಸೇರಿಕೊಂಡು ಏನು ಮಾಡಬಹುದು ಯೋಚಿಸಿ. ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಿಜಕ್ಕೂ ಇಂತಾ ದೇಶದ್ರೋಹಿ ಕಾಲೇಜುಗಳಿಗೆ ಮಾನ್ಯತೆಯನ್ನೇ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅದು ಎಡಿಟೆಡ್ ವಿಡಿಯೋ ಅಲ್ಲ. ಅದರಲ್ಲಿ ಸ್ಪಷ್ಟವಾಗಿ ಮೇಲ್ಜಾತಿಯ ದುರಹಂಕಾರ ಎದ್ದು ಕಾಣ್ತಾ ಇದೆ. ಅಲ್ಲಿ ನಾಟಕ ಮಾಡೋರಿಗಿಂತ ಅದಕ್ಕೆ ಕೇಕೆ ಹಾಕುವವರ ಮನಸ್ಥಿತಿ ಗಾಬರಿ ಹುಟ್ಟಿಸುತ್ತದೆ ಎಂದು ತಿಳಿಸಿದ್ದಾರೆ.
ಲೇಖಕ ಮಂಜು ಚಿನ್ಮಯಿ ಫೇಸ್ಬುಕ್ ನಲ್ಲಿ ಬರೆದು ಮನುಷ್ಯರ ಘನತೆಯನ್ನು ಅಣಕಿಸುವ ಕಾರ್ಯಕ್ರಮ ಕಾರ್ಯಕ್ರಮ ನಡೆಸುವ ಸಂಸ್ಥೆ ತನ್ನನ್ನು ತಾನು ವಿಶ್ವವಿದ್ಯಾಲಯ ಎಂದು ಕರೆದುಕೊಳ್ಳಬಾರದು. ಅದು ಅಸಹ್ಯ ಎಂದು ಟೀಕಿಸಿದ್ದಾರೆ.
ಕ್ರಮಕ್ಕೆ ಕಾಂಗ್ರೆಸ್ ಆಗ್ರಹ:
ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಇತ್ತೀಚೆಗೆ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ದಲಿತ ಸಮುದಾಯಗಳ ಕುರಿತು ತೀರಾ ಅಸಭ್ಯವಾಗಿ ನಿಂದನಾತ್ಮಕವಾಗಿ ಕಾರ್ಯಕ್ರಮ ನಡೆದಿರುವ ವಿಡಿಯೋ ಹರಿದಾಡುತ್ತಿದೆ.
ಹೀಗಾಗಿ ಬೆಂಗಳೂರು ಸಿಟಿ ಪೊಲೀಸರು ಅಥವಾ ಸಿಬಿ ಬೆಂಗಳೂರು ಇವರು ದಯವಿಟ್ಟು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಗ್ರಹಿಸುತ್ತದೆ. ಈ ರೀತಿಯ ಘಟನೆ ಅತ್ಯಂತ ಖಂಡನೀಯ ಎಂದು ಹೇಳಿದೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದಲಿತರಿಗೆ ಅವಮಾನಿಸಿರುವ ಜೈನ್ ಯೂನಿವರ್ಸಿಟಿಯ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ವಿರುದ್ಧ ದೂರು ನೀಡಲಾಯಿತು ಎಂದು ಮೂರ್ತಿ ಭೀಮರಾವ್ ಎನ್ನುವವರು ಹೇಳಿದ್ದಾರೆ.