ಬೆಂಗಳೂರಿನ ಜೈನ್ ಕಾಲೇಜಿನ ವಿದ್ಯಾರ್ಥಿಗಳು, ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ‘ಮ್ಯಾಡ್ ಸ್ಕಿಟ್’ ಪ್ರದರ್ಶನದಲ್ಲಿ ಅಪಮಾನ ಪಡಿಸಿದ್ದಾರೆಂಬ ಎಡಿಟೆಡ್ ವಿಡಿಯೋ ಕ್ಲಿಪ್ ನೋಡಿ ಅವಸರದ ತೀರ್ಮಾನಕ್ಕೆ ಯಾರೊಬ್ಬರೂ ಬರಬಾರದಾಗಿ ಭೀಮಾನುಯಾಯಿಗಳಲ್ಲಿ ವಿನಂತಿಸುತ್ತೇನೆ…
ಬಾಬಾ ಸಾಹೇಬ್ ಡಾ.ಅಂಬೇಡ್ಕರ್‌ರ ಬಗ್ಗೆ ಕೆಟ್ಟದಾಗಿ ಸ್ಕಿಟ್ ಮಾಡಿ ಅವಮಾನಿಸಿರುವ ಜೈನ್ ಕಾಲೇಜಜಿನ ವಿದ್ಯಾರ್ಥಿಗಳ ವಿರುದ್ಧ ರಾಷ್ಟ್ರದ್ರೋಹ ಕಾಯಿದೆಯ ಹಾಗೂ ಅಸ್ಪೃಶ್ಯತಾಚರಣೆ ಪ್ರತಿಬಂಧಕ ವಿಧೇಯಕದ ಅನ್ವಯ ದೂರು ದಾಖಲಿಸಿ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕೆಂಬ ಆಗ್ರಹಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ. ಮುಂದುವರೆದು ಜೈನ್ ಕಾಲೇಜಿನ ಮಾನ್ಯತೆಯನ್ನು ರದ್ಧುಪಡಿಸಿ ಕಾಲೇಜನ್ನು ಬ್ಯಾನ್ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಾಯ ತರುವ ಪ್ರತಿಭಟನೆಗಳನ್ನು ಕರ್ನಾಟಕಾದ್ಯಂತ ಹಮ್ಮಿಕೊಳ್ಳಬೇಕೆಂಬ ಜನಾಗ್ರಹಗಳೂ ಕೇಳಿಬರುತ್ತಿವೆ.
ಯಾರೋ ಕೆಲವು ಅಜ್ಞಾನಿಗಳು ಅವಿವೇಕಿಗಳು ತೋರಿಸಿರಬಹುದಾದ ವರ್ತನೆಯ ವಿರುದ್ಧ ಕ್ರಮ ಜರುಗಿಸಲು ಹೋಗಿ, ಘಟನೆಯಲ್ಲಿ ಪಾಲ್ಗೊಳ್ಳದಿರುವ ಕೆಲವು ಅಮಾಯಕ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಕಲ್ಲುಹಾಕುವ ಸಂಭವನೀಯ ಸಾಧ್ಯತೆಗಳನ್ನು ನಾವು ಅಲ್ಲಗಳೆಯಲಾಗುವುದಿಲ್ಲ. ಮ್ಯಾಡ್ ಸ್ಕಿಟ್ ನ ಮುಖ್ಯ ಭಾಗದಿಂದ ಎಡಿಟ್ ಮಾಡಿ ವೈರಲ್ ಆಗಿರುವ ಈ ವಿಡಿಯೋದಿಂದ ಸಹಜವಾಗಿ ಅನರ್ಥಗಳು ಉಂಟಾಗಿರುವ ಸಾಧ್ಯತೆಗಳ ಬಗ್ಗೆಯೂ ಪ್ರಜ್ಞಾವಂತರಾದ ನಾವು ಯೋಚಿಸಬೇಕಾಗುತ್ತದೆ. ಗುಡಿಗಳಿಗಿಂತಲೂ ಗ್ರಂಥಾಲಯ ಮತ್ತು ಶಾಲೆ ಕಾಲೇಜುಗಳನ್ನು ಸ್ಥಾಪಿಸಬೇಕೆಂಬ ವಿವೇಕದ ಪಾಠವನ್ನು ತಿಳಿಸಿರುವ ಜ್ಞಾನದಾಹಿ ಅಂಬೇಡ್ಕರ್ ಅವರ ಆಶಯದ ವಿರುದ್ಧವಾಗಿ ನಾವೀಗ ಜೈನ್ ಕಾಲೇಜನ್ನು ಬ್ಯಾನ್ ಮಾಡಬೇಕೆಂದು ಬಯಸುವುದು ಎಷ್ಟರಮಟ್ಟಿಗೆ ಸರಿ? ಎಳೆ ಚಿಗುರು ಪ್ರತಿಭೆಗಳಾದ ವಿದ್ಯಾರ್ಥಿಗಳ ಭವಿಷ್ಯದ ಬದುಕನ್ನು ಹೊಸಕಿ ಹಾಕುವ ಆಲೋಚನೆ ಒಳ್ಳೆಯದಲ್ಲ. ಜೈನ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿರುವ “ಮ್ಯಾಡ್ ಸ್ಕಿಟ್” ನ ಸಂಪೂರ್ಣ ವಿಡಿಯೋ ತರಿಸಿಕೊಂಡು ನೋಡಿ ಪರಿಶೀಲಿಸಿ ಒಟ್ಟಾರೆ ಸಂದರ್ಭದಲ್ಲಿ ಸ್ಕಿಟ್ ನ ಹಿಂದಿನ ಉದ್ದೇಶ ಏನಿತ್ತೆಂಬುದನ್ನು ನಾವು ಮೊದಲು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಇದಾಗಿರುವುದರಿಂದ ದಯಮಾಡಿ ಅವಸರದ ತೀರ್ಮಾನಕ್ಕೆ ಯಾರೊಬ್ಬರೂ ಬರಬಾರದಾಗಿ ಈ ಮೂಲಕ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ.
ಲೇಖಕರು: ಡಾ.ವಡ್ಡಗೆರೆ ನಾಗರಾಜಯ್ಯ