ರಾಜ್ಯ ಸರ್ಕಾರವು ರಾಜ್ಯಪಾಲರ ಬಾಯಲ್ಲಿ ಒಂದು ವರ್ಷದ ಸಾಧನೆಗಳ ಕುರಿತು ಭಾಷಣ ಮಾಡಿಸಿದೆ. ರಾಜ್ಯಪಾಲರ ಭಾಷಣ ನೋಡಿದರೆ, ಸರ್ಕಾರ ಯಾವ ಕೆಲಸವನ್ನೂ ಮಾಡದೆ ಬರಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಜನರ ಆರೋಪವನ್ನು ಸಾಬೀತು ಮಾಡುವಂತೆ ಇದೆ ಎಂದು ಪ್ರತಿಪಕ್ಷ ನಾಯಕ ಆರೋಪಿಸಿದ್ದಾರೆ
ರಾಜ್ಯವು ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಸೌಹಾರ್ಧದ ಸಮಸ್ಯೆ, ಅಶಾಂತಿಯ ವಾತಾವರಣ , ಕೃಷಿ ಬಿಕ್ಕಟ್ಟು, ನೇಕಾರರ, ಸಮಸ್ಯೆಗಳು, ಮೀನುಗಾರರ ಸಮಸ್ಯೆಗಳು, ಹಾಗೂ ಸಣ್ಣ ಕೈಗಾರಿಕೆಗಳಿಗೆ ಒತ್ತು ಕೊಡದೆ ಇದ್ದದ್ದು ಮುಂತಾದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.
ರಾಜಸ್ತಾನ ಬಿಟ್ಟರೆ ಕರ್ನಾಟಕ ಎರಡನೇ ಅತಿ ದೊಡ್ಡ ಒಣ ಭೂಮಿ ಇರುವ ರಾಜ್ಯ. ಈಗಾಗಲೇ ತೆಲಂಗಾಣದವರು ಕೃಷ್ಣ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಬಹಳ ಕಾಲದಿಂದ ಮಹದಾಯಿ, ಮೇಕೆದಾಟು, ಭದ್ರಾ-ಕೃಷ್ಣ ಮೇಲ್ದಂಡೆ, ತುಂಗಭದ್ರ ಅಣೆಕಟ್ಟುಗಳ ನಿರ್ಮಾಣ ಮುಂತಾದ ಅನೇಕ ನೀರಾವರಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ, ಸರ್ಕಾರ ನೀರಾವರಿ ವಿಚಾರದಲ್ಲಿ ಏನನ್ನೂ ಮಾಡಿಲ್ಲ ಎನ್ನುವುದನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಆರ್ಥಿಕತೆಯನ್ನು ನಿರ್ಮಾಣ ಮಾಡುವುದರಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಬಹಳ ದೊಡ್ಡದು. ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಎರಡೂ ವಲಯಗಳು ಸೇರಿದಂತೆ 2 ಕೋಟಿಗೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ನಯಾಪೈಸೆಯ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎನ್ನುವುದನ್ನು ಒಪ್ಪಿಕೊಂಡಿದೆ. ಈ ಕುರಿತು ರಾಜ್ಯಪಾಲರ ಭಾಷಣದಲ್ಲಿ ಒಂದೇ ಒಂದು ಮಾತು ಕೂಡ ಪ್ರಸ್ತಾಪವಾಗಿಲ್ಲ ಎಂದು ಆಪಾದಿಸಿದ್ದಾರೆ.


