Monday, September 16, 2024
Google search engine
Homeಜಿಲ್ಲೆತುಮಕೂರು ಕ್ಷೇತ್ರಕ್ಕೆ ಅಟ್ಟಿಕಾ ಬಾಬು ಅಪರಿಚಿತ ಮುಖ

ತುಮಕೂರು ಕ್ಷೇತ್ರಕ್ಕೆ ಅಟ್ಟಿಕಾ ಬಾಬು ಅಪರಿಚಿತ ಮುಖ

ತುಮಕೂರು ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ಹೆಸರನ್ನು ಅಧಿಕೃತಗೊಳಿಸದಿದ್ದರೂ ಅಟ್ಟಿಕಾ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬು ಕ್ಷೇತ್ರದಲ್ಲಿ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ. ಪದೇ ಪದೇ ತುಮಕೂರು ನಗರಕ್ಕೆ ಬರುತ್ತಿರುವ ಬಾಬು ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಸದ್ದು ಮಾಡುತ್ತಿದ್ದಾರೆ. ಅವರು ಕಾರ್ಯಕರ್ತರ ಮನದಲ್ಲಿ ನೆಲೆಸದಿದ್ದರೆ ಗೆಲುವು ಕಷ್ಟ ಸಾಧ್ಯ.

ಜೆಡಿಎಸ್ ಟಿಕೆಟ್ ಸಿಗುವುದಿಲ್ಲ ಎಂದು ಗೊತ್ತಾದ ಕೂಡಲೇ ತಾನೇ ಕಾಂಗ್ರೆಸ್ ನ ತುಮಕೂರು ಅಭ್ಯರ್ಥಿ ಎಂದು ಅಟ್ಟಿಕಾ ಬಾಬು ಪ್ರಚಾರ ಆರಂಭಿಸಿದರು. ಇದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಎರಡನೇ ಸಾಲಿನ ಮುಖಂಡರಿಗೆ ಕಸಿವಿಸಿ ಮೂಡಿಸಿತು. ಆದರೂ ಅಟ್ಟಿಕಾ ಬಾಬು ತಾನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಗಟ್ಟಿ ದನಿಯಲ್ಲಿ ಹೇಳತೊಡಗಿದರು.

ಪ್ರಣಾಳಿಕ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ತುಮಕೂರು ನಗರ ಕ್ಷೇತ್ರಕ್ಕೆ ಅಟ್ಟಿಕಾ ಬಾಬು ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ಬಹಿರಂಗಪಡಿಸುತ್ತಿದ್ದಂತೆಯೇ ಅಟ್ಟಿಕಾ ಬಾಬು ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳಲು ನಿರಾಕರಿಸಿದವರೆಲ್ಲ ಮೌನಕ್ಕೆ ಶರಣಾದರು. ಹೀಗಾಗಿ ಅಟ್ಟಿಕಾ ಬಾಬು ಈಗಾಗಲೇ ತುಮಕೂರು ನಗರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ವಾರಕ್ಕೆ ಒಮ್ಮೆ ಬಂದು ಕೆಲ ಮುಖಂಡರನ್ನು ಭೇಟಿ ಆಗಿ ಹೋಗಿದ್ದಾರೆ.

ತುಮಕೂರಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಪರಿಚಿತರು. ಅವರು ಸ್ಥಳೀಯರು. ಬೆಳಗು ಮತ್ತು ಸಂಜೆ ಕೈಗೆ ಸಿಗುವಂತಹ ಮುಖಂಡರು. ಆದರೆ ಅಟ್ಟಿಕಾ ಬಾಬು ಕಾರ್ಯಕರ್ತರಿಗೆ ಪರಿಚಿತರಲ್ಲ. ಕ್ಷೇತ್ರಕ್ಕೆ ಹೊರಗಿನವರು. ಪಕ್ಷದ ಕಾರ್ಯಕರ್ತರನ್ನು ಒಂದು ದಿನವೂ ಭೇಟಿಯಾಗಿ ಮಾತನಾಡಿಸಿಲ್ಲ. ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದಾರೆ. ಕ್ಷೇತ್ರದಲ್ಲಿ ಮೂಲ ಕಾರ್ಯಕರ್ತ ಮುಖಂಡರಿಗೆ ಭೇಟಿ ಮಾಡದೆ ಪ್ರಚಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸೋಮೇಶ್ವರ್ ಎನ್.ಆರ್ ಸ್ವಾಮಿ ಹೇಳುತ್ತಾರೆ.

ಅಟ್ಟಿಕಾ ಬಾಬು ಚಿನ್ನದ ವ್ಯಾಪಾರಿ. ಕೈಯಲ್ಲಿ ಸಾಕಷ್ಟು ಹಣವಿದೆ. ತುಮಕೂರು ಕ್ಷೇತ್ರಕ್ಕೆ ಟಿಕೆಟ್ ಗಿಟ್ಟಿಸಿಯೇ ತೀರುತ್ತೇನೆ ಎಂದು ತಿರುಗುತ್ತಿದ್ದಾರೆ. ಕ್ಷೇತ್ರಕ್ಕೂ ಭೇಟಿ ನೀಡುತ್ತಿದ್ದಾರೆ. ಇವರಿಗೆ ಕಾಂಗ್ರೆಸ್ ಮುಖಂಡ ಜಮೀರ್ ಅಹಮದ್ ಅವರ ಬೆಂಬಲವೂ ಇದೆ. ಈಗಾಗಲೇ ತುಮಕೂರಿಗೆ ಇಬ್ಬರು ನಾಯಕರು ಬಂದು ಹೋಗಿದ್ದಾರೆ. ಇದು ಮೂಲ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕಾರ್ಯಕರ್ತರ ವಿರೋಧದ ನಡುವೆಯೂ ಅಟ್ಟಿಕಾ ಬಾಬು ಕ್ಷೇತ್ರದಲ್ಲಿ ಪ್ರಚಾರ ಮಾಡುವುದನ್ನು ನಿಲ್ಲಿಸಿಲ್ಲ. ವಾರಕ್ಕೆ ಒಂದು ಬಾರಿ ಭೇಟಿ ನೀಡುತ್ತಾ ಕೆಲ ಪ್ರಮುಖರನ್ನು ಭೇಟಿ ಮಾಡುತ್ತಲೇ ಇದ್ದಾರೆ. ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿ ಅವರ ಬೆಂಬಲವನ್ನು ಪಡೆಯುತ್ತಿದ್ದಾರೆ. ಅದು ಚುನಾವಣೆ ಸಮಯದಲ್ಲಿ ಸಹಾಯಕ್ಕೆ ಬರಬಹುದು. ಬಾಬು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡುವ ಮೂಲಕ ಉಭಯ ಪಕ್ಷಗಳ ಓಟುಗಳನ್ನು ಪಡೆಯಲು ಸಿದ್ದತೆ ನಡೆಸುತ್ತಿದ್ದಾರೆ.

ಈ ನಡುವೆ ಮಾಜಿ ಶಾಸಕ ಡಾ.ರಫೀಕ್ ಅಹಮದ್ ನಾನು ತುಮಕೂರು ಕ್ಷೇತ್ರದ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಶತಾಯಗತಾಯ ಟಿಕೆಟ್ ಗಿಟ್ಟಿಸಲು ಶ್ರಮಿಸುತ್ತಿದ್ದಾರೆ. ಆದರೆ ಮಾಜಿ ಶಾಸರಿಗೆ ಹಣಕಾಸಿನ ಕೊರತೆ ಎಂದು ಹೇಳಲಾಗುತ್ತಿದೆ.ಇದು ಮಾಜಿ ಶಾಸಕರಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಟ್ಟಿಕಾ ಬಾಬು ತುಮಕೂರಿಗೆ ಹೊಸಬರು. ಪಕ್ಷದ ಬೆಳವಣಿಗೆಯಲ್ಲಿ ಬಾಬು ಪಾಲು ಶೂನ್ಯ. ಇದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಅಟ್ಟಿಕಾ ಬಾಬು ಬಳಿ ಹಣವಿದ್ದರೂ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸದಿದ್ದರೆ, ಅವರೊಂದಿಗೆ ಭೇಟಿ ಮಾಡಿ ಮಾತನಾಡದಿದ್ದರೆ ಎಷ್ಟೆಲ್ಲಾ ಶ್ರಮ ವಹಿಸಿದರೂ ಹೊಳೆಯಲ್ಲಿ ಹುಣಿಸೆ ಹಣ್ಣನ್ನು ತೊಳೆದಂತೆ ಆಗುತ್ತದೆ. ಹಾಗಾಗಿ ಕಾರ್ಯಕರ್ತರ ಮನದಲ್ಲಿ ನೆಲೆಯೂರಿದರೆ ಅದು ಅಟ್ಟಿಕಾ ಬಾಬು ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ.

ಕೆ.ಈ.ಸಿದ್ದಯ್ಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular