Sunday, September 8, 2024
Google search engine
Homeಮುಖಪುಟಕಾರ್ಪೋರೇಟ್ ಕುಳಗಳಿಗೆ ಮನ್ನಣೆ, ಬಡವರ ನಿರ್ಲಕ್ಷ ಮಾಡುವುದೇ ಬಜೆಟ್ ಉದ್ದೇಶ

ಕಾರ್ಪೋರೇಟ್ ಕುಳಗಳಿಗೆ ಮನ್ನಣೆ, ಬಡವರ ನಿರ್ಲಕ್ಷ ಮಾಡುವುದೇ ಬಜೆಟ್ ಉದ್ದೇಶ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡಿಸಿದ ಬಜೆಟ್ ಬಡವರ ವಿರೋಧಿಯಾಗಿದ್ದು, ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವುದೇ ಆಗಿದೆ ಎಂದು ಚಿಂತಕ ಸಿ.ಯತಿರಾಜ್ ಹೇಳಿದ್ದಾರೆ.

ನ್ಯೂಸ್ ಕಿಟ್.ಇನ್ ಜೊತೆ ಮಾತನಾಡಿದ ಅವರು, ಬಂಡವಾಳಗಾರರು ಸೃಷ್ಟಿಸಿದ ಸರಕುಗಳನ್ನು ಮಾರಾಟ ಮಾಡಲು ಅವಕಾಶವಾಗುವಂತಹ ವಾತಾವರಣ ಸೃಷ್ಟಿಸಿಲಾಗುತ್ತಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಬಂಡವಾಳಗಾರರಿಗೆ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಹಣಕಾಸು ಸಚಿವರು ಗ್ರಾಮೀಣಾಭಿವೃದ್ಧಿಗೆ ಒತ್ತನ್ನು ನೀಡಿಲ್ಲ. ಗ್ರಾಮೀಣಾಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ರೈತರು ಕೃಷಿಯಲ್ಲಿ ಟ್ರಾಕ್ಟರ್ ಉಪಯೋಗಿಸಿ ಸಾಲ ಮಾಡಿ ಸಾಯುವಂತೆ ಮಾಡುತ್ತಿದೆ. ಉತ್ಪಾದನೆ ಪೂರ್ತಿ ಬಂಡವಾಳಗಾರರ ವಶಕ್ಕೆ ನೀಡಲಾಗಿದೆ. ಕೃಷಿಯಲ್ಲಿ ಬಂಡವಾಳಗಾರರಿಗೆ ಅನುಕೂಲವಾಗುವಂತೆ ಬಜೆಟ್ ನಲ್ಲಿ ಅವಕಾಶ ನೀಡಲಾಗಿದೆ ಎಂದು ಟೀಕಿಸಿದರು.

ಜನಸಂಗ್ರಾಮ ಪರಿಷತ್ ತುಮಕೂರು ಸಂಚಾಲಕ ಪಂಡಿತ್ ಜವಾಹರ್ ಮಾತನಾಡಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವುದು ಕ್ರಾಂತಿಕಾರಿ ಬಜೆಟ್ ಅಲ್ಲ. ನೌಕರ ವರ್ಗಕ್ಕೆ ತೆರಿಗೆ ಪಾವತಿಯಲ್ಲಿ 7 ಲಕ್ಷದವರೆಗೆ ಶೂನ್ಯ ತೆರಿಗೆ ವಿಧಿಸಲಾಗಿದೆ. ಇದರಿಂದ ನೌಕರ ವರ್ಗಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ಪಂಡಿತ್ ಜವಾಹರ್

ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿಯಷ್ಟು ಹಣವನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ಇದರ ಬಳಕೆಯಾಗಬೇಕಾದರೆ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಅಲ್ಲಿಯವರೆಗೂ ಯೋಜನೆ ಜಾರಿಯಾಗುವುದಿಲ್ಲ. ಹಿಂದಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಮಹಾದಾಯಿ ಯೋಜನೆಗೆ 8 ಸಾವಿರ ಕೋಟಿ ರೂಪಾಯಿಯನ್ನು ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಆದರೆ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸದೇ ಇರುವ ಕಾರಣ ಆ ಯೋಜನೆಯು ಅನುಷ್ಠಾನಕ್ಕೆ ಬರಲೇ ಇಲ್ಲ. ಯೋಜನೆ ಪ್ರಕಟಿಸಿದರೆ ಸಾಲದು. ಅದರ ಅನುಷ್ಠಾನವೂ ಆಗಬೇಕು. ಆಗ ಮಾತ್ರ ಯೋಜನೆ ಪ್ರಕಟಿಸಿದ್ದು ಸಾರ್ಥಕವಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ರಾಜ್ಯದ ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ನಿಗದಿ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ರಾಜ್ಯದ ಬಹಳಷ್ಟು ನೀರಾವರಿ ಯೋಜನೆಗಳು ಮೂಲೆ ಸೇರಿವೆ. ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಮಹಾದಾಯಿ, ಎತ್ತಿನಹೊಳೆ ಯೋಜನೆಗಳಿಗೆ ಬಜೆಟ್ ನಲ್ಲಿ ಹಣ ಒದಗಿಸಬೇಕಿತ್ತು. ಅದನ್ನು ಮಾಡಿಲ್ಲ ಎಂದು ಟೀಕಿಸಿದರು.

ಬಜೆಟ್ ನಲ್ಲಿ ರೈತರಿಗೆ ಯಾವುದೇ ಯೋಜೆನಗಳನ್ನು ರೂಪಿಸಿಲ್ಲ. ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸುವ ಬಗ್ಗೆ ಏನನ್ನೂ ಹೇಳಿಲ್ಲ. ರೈತರು ಉತ್ಪಾದನಾ ವೆಚ್ಚದ ಶೇಕಡ 50ರಷ್ಟು ಬೆಂಬಲ ಬೆಲೆಯನ್ನು ಬಜೆಟ್ ನಲ್ಲಿ ಪ್ರಸ್ತಾಪ ಮಾಡಬೇಕಿತ್ತು. ಆದರೆ ಅದನ್ನು ಮಾಡಿಲ್ಲ. ಹೀಗಾಗಿ ರೈತರು ಕೃಷಿಯಿಂದ ಹೊರಗೆ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಡಾ.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದು ಶೇಕಡ 50ರಷ್ಟು ಬೆಂಬಲ ಬೆಲೆಯನ್ನು ನೀಡುವ ನಿರೀಕ್ಷೆ ಸುಳ್ಳಾಗಿದೆ. ಬಜೆಟ್ ನಲ್ಲಿ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಕೃಷಿಗೆ ಏನೂ ಕೊಟ್ಟಿಲ್ಲ. ಸಿರಿಧಾನ್ಯಗಳ ಕೇಂದ್ರ ಮಾಡಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.

ಈ ಶಿವಣ್ಣ, ಎಸ್.ಎಫ್.ಐ ತುಮಕೂರು ಜಿಲ್ಲಾಧ್ಯಕ್ಷ

ಎಸ್.ಎಫ್.ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ಮಾತನಾಡಿ, ಬಜೆಟ್ ನಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಅನುದಾನ ಇಲ್ಲ. ಶಿಕ್ಷಣಕ್ಕೆ ಕೇವಲ 1.30 ಕೋಟಿ ಮೀಸಲಿಟ್ಟಿರುವುದು ಯಾವುದಕ್ಕೂ ಸಾಲುವುದಿಲ್ಲ. ಒಟ್ಟು ಬಜೆಟ್ ನಲ್ಲಿ ಶೇಕಡ 30ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕಿತ್ತು. ಅದನ್ನು ಹಣಕಾಸು ಸಚಿವರು ಮಾಡಿಲ್ಲ. ಕೇವಲ 1.30 ಕೋಟಿ ಹಣ ನಿಗದಿಪಡಿಸಿರುವುದರಿಂದ ಯಾವುದಕ್ಕೂ ಸಾಲವುದಿಲ್ಲ. ಇದೊಂದು ಕಣ್ಣೊರೆಸುವ ತಂತ್ರವಾಗಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular