ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಗುಪ್ಪಟ್ಣ ಗ್ರಾಮದ ದೊಡ್ಡಮ್ಮ ಅವರಿಗೆ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮಾರಂಭವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್. ಮಹದೇವಪ್ಪ ಶ್ರೀಮತಿ ದೊಡ್ಡಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ನನ್ನಜ್ಜಿ ಶ್ರೀಮತಿ ದೊಡ್ಡಕ್ಕ ಅಕ್ಷರಸ್ತೆಯಲ್ಲ. ತನ್ನ ಪೂರ್ವಜರಿಂದ ಕಲಿತುಕೊಂಡಿದ್ದ ದೇವುಗಾನಿಕೆಯರ ಜನಪದ ಕಾವ್ಯವನ್ನು ಭಕ್ತಿಯಿಂದ ದೊಡ್ಡಮ್ಮ(ಕಾವಲ್ಲಮ್ಮ) ದೇವರ ಜಾತ್ರೆ, ಮೆರವಣಿಗೆಗಳಲ್ಲಿ ಭಾವಪರವಶವಾಗಿ ಹಾಡುತ್ತಿದ್ದರು ಎಂದು ಕಾಂತರಾಜು ಗುಪ್ಪಟ್ಣ ಹೇಳಿದ್ದಾರೆ.
ದಿವಗಂತ ಪುಟ್ಟನರಸಮ್ಮ, ಲಕ್ಷ್ಮಮ್ಮ, ಪುಟ್ಟಕ್ಕ, ಸಾಕಮ್ಮ ಮುಂತಾದವರು ಇವರ ಸಂಗಡಿಗರು. ಈ ರೀತಿ ನಮ್ಮೂರಿಗೆ ಮಾತ್ರ ಸೀಮಿತವಾಗಿದ್ದ ಇವರ ಗಾಯನವನ್ನು ವಿದ್ವಾಂಸರು ತಮ್ಮ ಸಂಶೋಧನಾ ಲೇಖನಗಳಲ್ಲಿ ಉಲ್ಲೇಖಿಸಿದ್ದಾರೆ.

ದೇವುಗಾನಿಕೆ ಜನಪದ ಅಧ್ಯಯನ – ಡಾ ಪು.ಮು.ಗಂಗಾಧರಯ್ಯ, ಬೆಂಗಳೂರು ವಿವಿ 2000, 2. ಗ್ರಾಮದೇವತೆ ದೊಡ್ಡಮ್ಮ – ಡಾ.ತುಂಬುಗಾನಳ್ಳಿ ಪ್ರಸನ್ನಕುಮಾರ್, ಕುಪ್ಪಂ ವಿವಿ, 2016, 3. ದೇವಕನ್ನಿಕೆ ಬುಕ್ಕಪಟ್ಟಣದ ಶ್ರೀದೊಡ್ಡಮ್ಮ – ಡಾ.ಜಿ.ಎನ್.ಕೆಂಪಯ್ಯ 2022 ಕೃತಿಗಳಲ್ಲಿ ದೊಡ್ಡಮ್ಮನವರ ಪದಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಇವುಗಳ ಜೊತೆಗೆ ಕಳೆದ ವರ್ಷ ನಾನು ಪ್ರಕಟಿಸಿದ ಜಗಜಾಲಾರ ಐತಿಹ್ಯಗಳ ನೋಟ ಕೃತಿಗೆ ಪ್ರೇರಣೆ ಮತ್ತು ಹೆಚ್ಚಿನ ಆಧಾರ ನನ್ನಜ್ಜಿಯೆ. ಇವೆಲ್ಲವುಗಳ ಫಲಶೃತಿಯಾಗಿ ನನ್ನಜ್ಜಿಗೆ ಕನ್ನಡ ಜಾನಪದ ಪರಿಷತ್ ನ 2022-23ನೇ ಸಾಲಿನ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಪರಿಷತ್ ರಾಜ್ಯಾಧ್ಯಕ್ಷ ಜಾನಪದ ಬಾಲಾಜಿ, ತುಮಕೂರು ಜಿಲ್ಲಾಧ್ಯಕ್ಷ ಶ್ರೀನಿವಾಸಮೂರ್ತಿ ಎಲ್, ಕೊರಟಗೆರೆ ತಾಲ್ಲೂಕು ಅಧ್ಯಕ್ಷ ಡಾ.ಡಿ.ಹೆಚ್.ಮಹೇಶ್ ಕುಮಾರ್ ದಡಿಘಟ್ಟಮಡಗು, ಮಹೇಶ್ ಮಲ್ಲಿಗೆ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.


