Saturday, October 19, 2024
Google search engine
Homeಮುಖಪುಟಪ್ರಧಾನಿ ಯಾದಗಿರಿ ಕ್ಷೇತ್ರದ ಅಭಿವೃದ್ಧಿಗೆ ಕಾರ್ಯಕ್ರಮ ಕೊಡಬೇಕಿತ್ತು - ಡಿ.ಕೆ.ಶಿವಕುಮಾರ್

ಪ್ರಧಾನಿ ಯಾದಗಿರಿ ಕ್ಷೇತ್ರದ ಅಭಿವೃದ್ಧಿಗೆ ಕಾರ್ಯಕ್ರಮ ಕೊಡಬೇಕಿತ್ತು – ಡಿ.ಕೆ.ಶಿವಕುಮಾರ್

ಇತ್ತೀಚೆಗೆ ನರೇಂದ್ರ ಮೋದಿ ಅವರು ಈ ಭಾಗಕ್ಕೆ ಬಂದು, ಈ ಭಾಗ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದ್ದಾರೆ. ನಾನು ಹೇಳುತ್ತೇನೆ. ನೀವು ಅಧಿಕಾರದಲ್ಲಿದ್ದೀರಿ. ನಿಮ್ಮ ಅಧಿಕಾರ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಯಾವುದಾದರೂ ಕಾರ್ಯಕ್ರಮ ಕೊಟ್ಟಿದ್ದರೆ ನೀವು ಏನು ಹೇಳಿದರೂ ಕೇಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಯಾದಗಿರಿಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಭಾಗಕ್ಕೆ 371 ಜೆ ಮೂಲಕ ಸಂವಿಧಾನಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಬೇಕು ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆಗ ಉಪಪ್ರಧಾನಿಯಾಗಿದ್ದ ಆಡ್ವಾಣಿ ಅವರು ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಪತ್ರ ಬರೆದರು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೋರಾಟ ಮುಂದುವರಿಸಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಎಲ್ಲ ವಿರೋಧ ಪಕ್ಷಗಳ ಜತೆ ಮಾತನಾಡಿ, 371ಜೆ ತಿದ್ದುಪಡಿ ಮಾಡುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟರು. ಬಿಜೆಪಿ ಸರ್ಕಾರ ಇಂತಹ ಯಾವುದಾದರೂ ಒಂದು ಕಾರ್ಯಕ್ರಮ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಬಡವರು, ರೈತರ ಬದುಕು ನೀಡಲು ಕಾರ್ಯಕ್ರಮ ರೂಪಿಸಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಕೆರೆ ತುಂಬಿಸುವ, ಕುಡಿಯುವ ನೀರು, ಇಎಸ್ಐ, ಮೆಡಿಕಲ್ ಕಾಲೇಜುಗಳನ್ನು ಮೋದಿ, ಯಡಿಯೂರಪ್ಪ ಅಥವಾ ಬೊಮ್ಮಾಯಿ ಅವರು ಮಾಡಿದ್ದರಾ ಎಂದು ಜನರನ್ನು ಕೇಳಿದರು.

ಪಿಎಸ್ಐ ನೇಮಕಾತಿ ಸೇರಿದಂತೆ ಎಲ್ಲಾ ಇಲಾಖೆ ಹುದ್ದೆಗಳು ಹಾಗೂ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಅಕ್ರಮ ಮಾಡಿ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ. ಈ ಎಲ್ಲ ಅಕ್ರಮಗಳಿಗೆ ಮುಖ್ಯಮಂತ್ರಿಗಳು, ಮಂತ್ರಿಗಳು ಇಲಾಖೆ ಅಧಿಕಾರಿಗಳ ಸಂಪೂರ್ಣ ಬೆಂಬಲ ನೀಡಲಾಗಿದೆ. ಪರಿಣಾಮ ಐಪಿಎಸ್ ಅಧಿಕಾರಿಯಿಂದ ಕೆಲವು ಅಭ್ಯರ್ಥಿವರೆಗೂ ನೂರಾರು ಮಂದಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾರೆ. ಇದಕ್ಕೆಲ್ಲ ಕಾರಣ ಯಾರು? ಬಿಜೆಪಿ ಸರ್ಕಾರ ಎಂದು ಟೀಕಿಸಿದರು.

ಈ ಸರ್ಕಾರ ಯುವಕ ಉದ್ಯೋಗದಿಂದ, ಸರ್ಕಾರದ ಕಾಮಗಾರಿ ಗುತ್ತಿಗೆವರೆಗೂ ಪ್ರತಿಯೊಂದರಲ್ಲೂ ಲಂಚ, ಭ್ರಷ್ಟಾಚಾರ ಮಾಡುತ್ತಿದೆ. ಅವರದೇ ಪಕ್ಷದ ಕಾರ್ಯಕರ್ತ ಸಂತೋಷ್ ಪಾಟೀಲ್ ಸಚಿವರಾಗಿದ್ದ ಈಶ್ವರಪ್ಪ ಅವರಿಗೆ 40% ಕಮಿಷನ್ ನೀಡಲಾಗದೇ ಆತ್ಮಹತ್ಯೆ ಮಾಡಿಕೊಂಡು ಸತ್ತುಹೋದ. ಜಿಲ್ಲಾ ಮಂತ್ರಿಯೇ ಆತ ಕೆಲಸ ಮಾಡಿದ್ದಾನೆ ಎಂದು ಹೇಳಿದ್ದರೂ ಆತನ ಕೆಲಸಕ್ಕೆ ಬಿಲ್ ಪಾವತಿ ಆಗಿಲ್ಲ ಎಂದು ಆರೋಪಿಸಿದರು.

ಈ ಭಾಗದ ಜನರಿಗೆ ಸಂವಿಧಾನದ ಮೂಲಕ ಶಕ್ತಿ ನೀಡಿದ್ದು ಯಾರು? ಕಾಂಗ್ರೆಸ್ ಪಕ್ಷ. ಮೀಸಲಾತಿ ಕೊಟ್ಟಿದ್ದು ಯಾರು? ರಾಜಕೀಯ, ಶೈಕ್ಷಣಿಕವಾಗಿ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೊಡುಗೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಮೋದಿ ಅವರು ಜನ್ ಧನ್ ಅಕೌಂಟ್ ಖಾತೆ ತೆರೆಸಿ ನಿಮ್ಮ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು, ಆ ಹಣ ಬಂತಾ? ಮುಂದೆ ಬಿಜೆಪಿಯವರು ನಿಮ್ಮ ಬಳಿಗೆ ಬಂದಾಗ, ಕಪ್ಪು ಹಣ ತಂದು ನಿಮ್ಮ ಖಾತಿಗೆ ಹಾಕುತ್ತೇನೆ ಎಂದಿದಲ್ಲಪ್ಪಾ, ಎಲ್ಲಿ ಎಂದು ಕೇಳಬೇಕು.

ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದ ಮೋದಿ ಅವರೇ ಎಲ್ಲಿ ಆದಾಯ ಡಬಲ್ ಆಗಿದೆ? ಆದಾಯ ಪಾತಾಳಕ್ಕೆ ಹೋಗಿದ್ದು, ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು, ಕೊಟ್ಟರಾ? ನಿಮಗೆ ಯಾರಿಗಾದರೂ ಕೆಲಸ ಸಿಕ್ಕಿತಾ? ಇಲ್ಲ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular