ಮಾಜಿ ಸಚಿವ ಎಚ್.ವಿಶ್ವನಾಥ್ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರಾ ಎಂಬ ಊಹಾಪೋಹಗಳು ಎದ್ದಿರುವ ನಡುವೆಯೇ (ಜನವರಿ 27ರಂದು) ಇಂದು ವಿಶ್ವನಾಥ್ ಕಾಂಗ್ರೆಸ್ ನ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸರ್ಜೇವಾಲ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಜೆಗೆ ನಾಂದಿಯಾಗಿದೆ.
ಬಿಜೆಪಿಗೆ ಸೇರ್ಪಡೆಗೊಂಡ ಆರಂಭದಿಂದಲೂ ಸ್ವಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಎಚ್. ವಿಶ್ವನಾಥ್ ಬಿಜೆಪಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ವಿಶ್ವನಾಥ್ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ ಮಾಡಿದರೂ ಅವರ ವಿರುದ್ಧ ಬಿಜಪಿ ಕ್ರಮ ಕೈಗೊಳ್ಳದೆ ಮೌನವಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದರು ಮತ್ತು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ವಿರುದ್ಧವೂ ಟೀಕೆಗಳನ್ನು ಮಾಡಿದ್ದರು. ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಶಿಕ್ಷಣ ಸಚಿವರು ತೆಗೆದುಕೊಂಡ ನಿಲುವಿನ ಬಗ್ಗೆಯೂ ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ಹಿಡಿದಿರುವ ಮಾರ್ಗ ಸರಿಯಲ್ಲ ಎಂದು ಆರೋಪ ಮಾಡಿದ್ದರು.
ಇಷ್ಟೆಲ್ಲ ಆದರೂ, ಬಿಜೆಪಿಯ ಬಲಿಷ್ಠ ಹೈಕಮಾಂಡ್ ಎಚ್.ವಿಶ್ವನಾಥ್ ವಿರುದ್ಧ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದೆ. ಇದನ್ನು ನೋಡಿದರೆ ಬಿಜೆಪಿ ಹೈಕಮಾಂಡ್ ಎಷ್ಟೊಂದು ದುರ್ಬಲವಾಗಿದೆ ಎಂಬುದು ಅರ್ಥಮಾಡಿಕೊಳ್ಳಬಹುದು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಅವರನ್ನು ಗುರಿ ಮಾಡಿ ಆರೋಪಗಳನ್ನು ಮಾಡುತ್ತಲೇ ಬಂದರು. ಕೊನೆಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಸೇರಿದರು. ಅಧ್ಯಕ್ಷರೂ ಆಗಿದರು. ಅಲ್ಲಿಯೂ ಹೆಚ್ಚು ದಿನ ಇರದೆ ಜೆಡಿಎಸ್ ಮುಖಂಡರ ನಿಲುವುಗಳ ವಿರುದ್ಧ ಟೀಕಾಪ್ರಹಾರ ನಡೆಸಿ, ಅಲ್ಲಿಯೂ ನಿಲ್ಲದೆ ನಂತರ ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಸೇರ್ಪಡೆಯಾದ ದಿನದಿಂದಲೂ ಸ್ವಪಕ್ಷದ ವಿರುದ್ಧ ಟೀಕೆ ಮಾಡುತ್ತಲೇ ಬಂದರು. ಆಗಲೂ ಎಚ್.ವಿಶ್ವನಾಥ್ ಅವರ ಮನಸ್ಸು ಕಾಂಗ್ರೆಸ್ ನಲ್ಲಿದ್ದರೆ, ದೇಹ ಬಿಜೆಪಿಯಲ್ಲಿ ಎಂಬಂತೆ ಇದ್ದರು. ಇರುವ ಮೂರು ಪಕ್ಷಗಳಲ್ಲೂ ಅವರ ಮನಸ್ಸು ಡೋಲಾಯಮಾನ ಸ್ಥಿತಿಯಲ್ಲಿ ಇತ್ತು.
ಈಗ ಬಿಜೆಪಿಯಲ್ಲೂ ಅವರು ಹೆಚ್ಚು ಇರಲಾರರು. ಬಿಜೆಪಿ ಸಂಸ್ಕೃತಿ, ಆ ಪಕ್ಷದ ನಿಲುಗಳು ಎಚ್.ವಿಶ್ವನಾಥ್ ಅವರಿಗೆ ಒಗ್ಗುತ್ತಿಲ್ಲ. ಆ ಕಾರಣಕ್ಕಾಗಿಯೇ ಅವರು ಬಿಜೆಪಿ ಬಿಡುವ ಹಂತಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಹತ್ತಿರವಾಗುವ ಕೆಲಸ ಮಾಡುತ್ತಿದ್ದಾರೆ ವಿಶ್ವನಾಥ್.
ಕಳೆದ ಹಲವು ದಿನಗಳಿಂದ ಎಚ್.ವಿಶ್ವನಾಥ್ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದು ಬಿಟ್ಟಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸಿಡಿಮಿಡಿ ವ್ಯಕ್ತಪಡಿಸುತ್ತಿದ್ದ ವಿಶ್ವನಾಥ್ ಈಗ ಮೌನಕ್ಕೆ ಶರಣಾಗಿದ್ದಾರೆ. ಇದು ಕಾಂಗ್ರೆಸ್ ಸೇರ್ಪಡೆಯಾಗಲು ರಹದಾರಿಯಾಗಿದೆ. ಅವರ ಸ್ಥಿತಿ ಇಲ್ಲಿಯೂ ಇರಲಾರೆ, ಅಲ್ಲಿಯೂ ಇರಲಾರೆ ಎಂಬ ದ್ವಂದದಲ್ಲಿ ವಿಶ್ವನಾಥ್ ಮುಳುಗಿದ್ದಾರೆ.
ಎಚ್.ವಿಶ್ವನಾಥ್ ಎಂಬ ಹಳ್ಳಿಹಕ್ಕಿ ನಿಧಾನಗತಿಯಲ್ಲಿ ಮರಳಿ ಕಾಂಗ್ರೆಸ್ ಗೂಡಿಗೆ ಹೋಗಲು ಕಸರತ್ತು ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಗೂಡು ಸೇರಲು ವೇದಿಕೆ ಸಿದ್ದಮಾಡಿಕೊಳ್ಳುತ್ತಿದೆ.
ಕೆ.ಈ.ಸಿದ್ದಯ್ಯ