ಗಣರಾಜ್ಯೋತ್ಸವ ದಿನದಂದು ನಮ್ಮನ್ನು ಸಂವಿಧಾನಕ್ಕೆ ಸಮರ್ಪಣೆ ಮಾಡಿಕೊಂಡು ಸಂವಿಧಾನಬದ್ಧವಾಗಿ ನಡೆದು ಭಾರತದ ಪ್ರಗತಿಗೆ ಸಂಕಲ್ಪ ಮಾಡಿಕೊಳ್ಳುವ ದಿನ. ನಾವೆಲ್ಲರೂ ಆ ಸಂಕಲ್ಪವನ್ನು ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ನ್ಯಾಷನಲ್ ಮಿಲಿಟರಿ ವಾರ್ ಮೆಮೋರಿಯಲ್ ಬಳಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದ ಬಳಿಕ ಮಾಧ್ಯಮ ಗಳೊಂದಿಗೆ ಅವರು ಮಾತನಾಡಿದರು.
ವಿಶ್ವಕ್ಕೇ ಭಾರತದ ವಿಸ್ತೃತವಾಗಿರುವ ಶಕ್ತಿ, ಭಾರತದ ಭವ್ಯ ಪರಂಪರೆ ಸದಾ ಕಾಲ ಪ್ರತ್ಯೇಕವಾಗಿ, ವಿಭಿನ್ನವಾಗಿ ಜಗತ್ತಿನಲ್ಲಿದೆ. ಆಧುನಿಕ, ಪ್ರಗತಿಪರವಾದ ಭಾರತ. ಮಾನವೀಯತೆಯ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಎಂಬ ಧ್ಯೇಯ ನುಡಿಯಿಂದ ಮುನ್ನಡೆಯುತ್ತಿದ್ದೇವೆ ಎಂದರು.
ರಾಜ್ಯದ ಎಸ್.ಎಂ.ಕೃಷ್ಣಾ ಅವರಿಗೆ ಪದ್ಮವಿಭೂಷಣ, ಸುಧಾಮೂರ್ತಿ, ಎಸ್.ಎಲ್.ಭೈರಪ್ಪ ಸೇರಿ ಎಂಟು ಗಣ್ಯರಿಗೆ ಪದ್ಮಪ್ರಶಸ್ತಿಗಳು ಘೋಷಣೆಯಾಗಿವೆ. ಯಾವ ಅಪೇಕ್ಷೆಯೂ ಇಲ್ಲದೆ ಎಲೆಮರೆಕಾಯಿಯಾಗಿ ಕೆಲಸ ಮಾಡಿದವರನ್ನು ಗುರುತಿಸಿ ಪದ್ಮಪ್ರಶಸ್ತಿಗಳನ್ನು ನೀಡುವ ವಿನೂತನ ಪದ್ಧತಿಯನ್ನು ಅಳವಡಿಸಿದ್ದಾರೆ. ಇದು ಅವರ ಕಾರ್ಯವೈಖರಿ ಎಂದು ಪ್ರಧಾನಿಯನ್ನು ಕೊಂಡಾಡಿದರು.
ಪ್ರಧಾನಿಗಳು ಗುಣಾತ್ಮಕ ಕಾರ್ಯಕ್ಕೆ ಬೆಲೆ ನೀಡಿದ್ದಾರೆ. ಕರ್ನಾಟಕಕ್ಕೆ ಎಂಟು ಪ್ರಶಸ್ತಿ ದೊರೆತಿರುವುದು ನಮ್ಮ ಹೆಮ್ಮೆ. ಕರ್ನಾಟಕದ ವಿಪುಲ ಮಾನವ ಪ್ರತಿಭೆಯನ್ನು ತೋರಿದಂತಾಗಿದೆ ಎಂದು ಹೇಳಿದರು.
ತುಮಕೂರಿನಲ್ಲಿ 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾಡಳಿತದಿಂದ ಆಚರಿಸಲಾದ ಗಣರಾಜ್ಯೊತ್ಸವದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಿ ಆಕರ್ಷಕ ಪಥ ಸಂಚಲನ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿದರು.