ಬೆಂಗಳೂರು ವಿಶ್ವವಿದ್ಯಾಲಯದ ಬಿಎ ಐಚ್ಚಿಕ ಪದವಿಯ 3ನೇ ಸೆಮಿಸ್ಟರಿನ ಪತ್ರಿಕೆ-6ರ ಪಠ್ಯಪುಸ್ತಕದಲ್ಲಿರುವ ದಲಿತ ಸಾಹಿತ್ಯದ ತಾತ್ವಿಕತೆ ಎಂಬ ಪಾಠವನ್ನು ಪಠ್ಯದಿಂದ ಕೈ ಬಿಡಲಾಗಿದೆ ಎಂದು ಬೆಂಗಳೂರು ವಿವಿ ಪ್ರಕಟನೆ ಹೊರಡಿಸಿದೆ.
ದಲಿತ ಸಾಹಿತ್ಯದ ತಾತ್ವಿಕತೆ ಎಂಬ ಲೇಖನದಲ್ಲಿ ಕೆಲವು ಜಾತಿ ಸೂಚಕವಾದ ಆಕ್ಷೇಪಾರ್ಹ ಪದಬಳಕೆ ಇರುವುದರಿಂದ ಹಾಗೂ ಕೆಲವು ಮಾಹಿತಿ ದೋಷ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಮಾಜದ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು ಎಂಬ ಸದುದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಜನವರಿ 22ರಂದು ನಡೆದ ಕನ್ನಡ ಸ್ನಾತಕ ಅಧ್ಯಯನ ಮಂಡಳಿಯ ಸಭೆಯಲ್ಲಿ ಹಾಗೂ ಜನವರಿ 24ರಂದು ನಡೆದ ಸಿಂಡಿಕೇಟ್ ಸಭೆಯ ನಿರ್ಣಯದಂತೆ ಲೇಖನವನ್ನು ಈ ಕೂಡಲೇ ಪಠ್ಯದಿಂದ ಹಾಗೂ ಪರೀಕ್ಷೆಯಿಂದ ಕೈ ಬಿಡಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇನ್ನು ಮುಂದೆ ಸಮಾಜದ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದಂತೆ ಪಠ್ಯವನ್ನು ರೂಪಿಸಲು ಅಧ್ಯಯನ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ವಿವಿ ಪ್ರಕಟಣೆಯನ್ನು ಉಲ್ಲೇಖಿಸಿ ವಾರ್ತಾಭಾರತಿ.ಕಾಂ ವರದಿ ಮಾಡಿದೆ.