40ರಷ್ಟು ಕಮಿಷನ್ ದುರಾಸೆಗೆ ಅಮಾಯಕ ಗುತ್ತಿಗೆದಾರರನ್ನು ಬಲಿಪಡೆದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿಂದು ಮಾತನಾಡಿದ ಅವರು, ಬಿಜೆಪಿ ಪಕ್ಷ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿರುವುದಲ್ಲ, ಆಪರೇಷನ್ ಕಮಲ ಮಾಡಿ ಶಾಸಕರನ್ನು ಖರೀದಿಸಿ ಅನೈತಿಕ ಮಾರ್ಗದ ಮೂಲಕ ಸರ್ಕಾರ ರಚನೆ ಮಾಡಿರುವುದು ಎಂದು ತಿಳಿಸಿದರು.
ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು, ಇದನ್ನೇ ಕುಮಾರಸ್ವಾಮಿ ಆಗಾಗ ಕಾಂಗ್ರೆಸ್ ನವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎನ್ನುತ್ತಾರೆ, ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಕಾರಣಕ್ಕೆ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದು, ಕುಮಾರಸ್ವಾಮಿ ಏನು ಮಹಾನ್ ಪರೋಪಕಾರಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಬೆಂಬಲ ನೀಡಿದ್ದಲ್ಲ ಎಂದರು.
ನಮ್ಮ ಸರ್ಕಾರ ಹೋಗಲು ಸಿದ್ದರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಹೇಳುತ್ತಾರೆ, ಕೊಟ್ಟ ಕುದುರೆ ಏರಲಾರದವ ವೀರನು ಅಲ್ಲ, ಶೂರನೂ ಅಲ್ಲ. ಇದು ಕುಮಾರಸ್ವಾಮಿ ಅವರಿಗೆ ಹೊಂದಿಕೆಯಾಗುತ್ತದೆ. ಕೊಟ್ಟ ಅಧಿಕಾರವನ್ನು ಉಳಿಸಿಕೊಳ್ಳಲಾಗದೆ ಈಗ ನಮ್ಮ ಮೇಲೆ ಗೂಬೆ ಕೂರಿಸಲಿ ಎಂದು ನಾವು ನಿಮಗೆ ಅಧಿಕಾರ ನೀಡಿದ್ದಾ ಕುಮಾರಸ್ವಾಮಿ? ಬಿಜೆಪಿಗೂ ಜೆಡಿಎಎಸ್ ಗೂ ಯಾವ ವ್ಯತ್ಯಾಸವೂ ಇಲ್ಲ, ಬಿಜೆಪಿ ಬಹಿರಂಗವಾಗಿ ಅಲ್ಪಸಂಖ್ಯಾತರ ವಿರೋಧ ಮಾಡಿದರೆ, ಜೆಡಿಎಸ್ ನವರು ಒಳಗೊಳಗೆ ವಿರೋಧ ಮಾಡುತ್ತಾರೆ. ಇಂಥವರ ಮಾತುಗಳನ್ನು ಅಲ್ಪಸಂಖ್ಯಾತ ಬಂಧುಗಳು ನಂಬಿ ಮೋಸ ಹೋಗಬಾರದು ಎಂದು ಸಲಹೆ ನೀಡಿದರು.
ನರೇಂದ್ರ ಮೋದಿ ಹೇಳುವ ಸಬ್ ಕ ಸಾಥ್ ಸಬ್ ಕ ವಿಕಾಸ್ ನಲ್ಲಿ ಮಕ್ಕಳು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಯುವಕರನ್ನು ಹೊರಗಿಟ್ಟಿದ್ದಾರೆ. ಮೋದಿಜೀ ಯಾಕ್ರೀ ಇಂಥಾ ಸುಳ್ಳುಗಳನ್ನು ಹೇಳುತ್ತೀರಿ? ಮೋದಿ ಈ ದೇಶವನ್ನು ಸಾಲಗಾರರ ದೇಶವಾಗಿ ಮಾಡಿದ್ದಾರೆ. ಸ್ವಾತಂತ್ರ್ಯ ನಂತರದಿಂದ ಮನಮೋಹನ್ ಸಿಂಗ್ ಅವರ ಸರ್ಕಾರದ ಕೊನೆಯವರೆಗೆ ದೇಶದ ಒಟ್ಟು ಸಾಲ ಇದ್ದದ್ದು 53 ಲಕ್ಷ ಕೋಟಿ. ಈ ವರ್ಷದ ಮಾರ್ಚ್ ಅಂತ್ಯಕ್ಕೆ ದೇಶದ ಒಟ್ಟು ಸಾಲ 153 ಲಕ್ಷ ಕೋಟಿಗೆ ತಲುಪಲಿದೆ. 9 ವರ್ಷದಲ್ಲಿ ಮೋದಿ ಅವರು 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಆಪಾದಿಸಿದರು.
ಬಿಜೆಪಿ ಒಂದು ಕೋಮುವಾದಿ ಪಕ್ಷ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ರನ್ನು ಪರಸ್ಪರ ಎತ್ತಿಕಟ್ಟಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಜಾಬ್, ಹಲಾಲ್ ಇವೆಲ್ಲ ವಿವಾದವಾಗಿಸುವುದು ಜನರಿಗೆ ಬೇಕಿತ್ತಾ? ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ಜನರಿಗೆ ವ್ಯಾಪಾರ ನಿರ್ಬಂಧ ಮಾಡುವಂತ ಕೀಳು ಮಟ್ಟಕ್ಕೆ ಇಳಿದ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಲೇವಡಿ ಮಾಡಿದರು.
ಅಂಬೇಡ್ಕರರ ಸಂವಿಧಾನದ ಆಶಯ ಏನು? ಎಲ್ಲರಿಗೂ ಸಮಪಾಲು, ಸಮಬಾಳು, ಸಹಿಷ್ಣುತೆ, ಸಹಬಾಳ್ವೆಯಲ್ಲಿ ನಂಬಿಕೆಯಿಟ್ಟುಕೊಂಡವರು ನಾವು, ಮನುಷ್ಯತ್ವಕ್ಕೆ ವಿರುದ್ಧ ಇರುವವರು ಬಿಜೆಪಿಯವರು. ಜಗತ್ತಿನ ಯಾವ ಧರ್ಮವೂ ಬೇರೆಯವರನ್ನು ಕೊಲ್ಲು ಎಂದು ಹೇಳುವುದಿಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸು ಎಂದು ಎಲ್ಲ ಧರ್ಮಗಳು ಹೇಳುತ್ತವೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು ಜನ ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಜನ ನೆಮ್ಮದಿಯಿಂದ ಬದುಕಬೇಕು ಎಂದಾದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ನಾವು ಅಧಿಕಾರಕ್ಕೆ ಬಂದರೆ ಬಡಜನರಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ನೀಡುತ್ತೇವೆ. ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರೆ ಗುಜರಾತ್, ಉತ್ತರ ಪ್ರದೇಶದಲ್ಲಿ ಉಚಿತವಾಗಿ ಅಕ್ಕಿ ನೀಡುತ್ತಿದ್ದಾರ? ಯಾಕೆ ಕೊಡುತ್ತಿಲ್ಲ ಬೊಮ್ಮಾಯಿ? ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುವ ಎಸ್,ಸಿ,ಪಿ/ಟಿ,ಎಸ್,ಪಿ ಯೋಜನೆ ಜಾರಿ ಮಾಡಿದ್ದು ನಮ್ಮ ಸರ್ಕಾರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಜಾರಿಗೆ ಮಾಡಿದ್ದು ನಮ್ಮ ಸರ್ಕಾರ. ದೇಶದಲ್ಲೆ ಮೊದಲ ಬಾರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಿದವರು ನಾವು ಎಂದು ಹೇಳಿದರು.
ಹಿಂದೆ ನಾವು ಅಧಿಕಾರದಲ್ಲಿದ್ದಾಗ ಕೊಬ್ಬರಿಗೆ ಪ್ರೋತ್ಸಾಹಧನವನ್ನು ನೀಡಿದ್ದೆವು. ಬರಗಾಲ ಬಂದಾಗ ಪ್ರತೀ ತೆಂಗಿನ ಗಿಡಕ್ಕೆ 1000 ರೂ. ನೀಡಿದ್ದೆವು. ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೊಬ್ಬರಿ, ತೆಂಗಿಗೆ ಪ್ರೋತ್ಸಾಹಧನವನ್ನು ಖಂಡಿತಾ ನೀಡುತ್ತೇವೆ. ನಿಮ್ಮ ಸಹಕಾರ ಕಾಂಗ್ರೆಸ್ ಗೆ ಇರಲಿ. ಕೋಮುವಾದಿ, ಭ್ರಷ್ಟ ಬಿಜೆಪಿಯನ್ನು ಅಧಿಕಾರದಿಂದ ಕಿತ್ತು ಹಾಕುವ ಕೆಲಸವನ್ನು ತುಮಕೂರಿನ ಜನ ಮಾಡಬೇಕು. ತುಮಕೂರಿನ ಎಲ್ಲಾ ನಾಯಕರು ಒಂದಾಗಿ ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಕನಿಷ್ಠ 8 ರಿಂದ 9 ಸ್ಥಾನಗಳನ್ನು ಗೆಲ್ಲಲು ಶ್ರಮಿಸಿಬೇಕು ಎಂದು ಮನವಿ ಮಾಡಿದರು.