ಬಿಜೆಪಿ ನಡೆಸುತ್ತಿರುವ ದುರಾಡಳಿತವನ್ನು ಜನರ ಧ್ವನಿ ಮೂಲಕ ಜನತೆಗೆ ತಿಳಿಸಲು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೇವೆ. ಡಬಲ್ ಇಂಜಿನ್ ಬಿಜೆಪಿ ಸರ್ಕಾರ ತುಮಕೂರು ಜಿಲ್ಲೆಗೆ ಏನು ಮಾಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.
ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಧ್ವನಿ 2023ರ ಚುನಾವಣೆಯಲ್ಲಿ ಮನೆಮನೆಗೂ ತಲುಪಿಸಬೇಕು ಎಂಬುವುದು ನಮ್ಮ ಆಸೆ. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್.ಎ.ಎಲ್ ಗೆ ಬಂದಿದ್ದರು. 2018ರ ವೇಳೆಗೆ ಮೊದಲ ಹೆಲಿಕಾಪ್ಟರ್ ಹಾರುತ್ತದೆ ಎಂದು ಹೇಳಿದ್ದರು. ಆದರೆ ಇದುವರೆವಿಗೂ ಹೆಲಿಕಾಪ್ಟರ್ ಹಾರಿಲ್ಲ ಎಂದು ಲೇವಡಿ ಮಾಡಿದರು.
ತುಮಕೂರು ಜಿಲ್ಲೆಯಲ್ಲಿ 6 ಸಾವಿರ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಹೆಚ್.ಎಂ.ಟಿ ಫ್ಯಾಕ್ಟರಿ ಆಧುನಿಕತೆಗೆ ನರಳಿ ಹೋಯ್ತು. ಅದು ಮುಚ್ಚಿದ ಮೇಲೆ ಇಸ್ರೋ ಮಾಡುತ್ತೇವೆ ಅಂದರು. ಆದರೆ ಏನೂ ಆಗಲಿಲ್ಲ ಎಂದು ಟೀಕಿಸಿದರು.
ಎತ್ತಿನಹೊಳೆ ಯೋಜನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 13 ಸಾವಿರ ಕೋಟಿ ಕೊಟ್ಟರು. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಎಷ್ಟು ಹಣ ಕೊಟ್ಟಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಭದ್ರಾ ಮೇಲ್ದಂಡೆ, ಹೇಮಾವತಿ ಸಬ್ ಕೆನಾಲ್ ಗೆ ಹಣ ಬಿಡುಗಡೆ
ಸ್ಮಾರ್ಟ್ ಸಿಟಿಗೆ ಸಾವಿರಾರು ಕೋಟಿ ರೂಪಾಯಿ ಹಣ ಖರ್ಚು ಮಾಡಿದ್ದರೂ ತುಮಕೂರು ನಗರ ಸ್ಮಾರ್ಟ್ ಸಿಟಿ ಆಗಿಲ್ಲ. ಇದರಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಷಡಕ್ಷರಿ ಕತೆ ಹೇಳಿ ಯಡಿಯೂರಪ್ಪ ಸ್ಥಿತಿ ಹೇಳಿದ ಕೆ.ಎನ್.ಆರ್
ತುಮಕೂರಿನಲ್ಲಿ ನಡೆದ ಪ್ರಜಾಧ್ವನಿ ಬಸ್ ಯಾತ್ರೆ ಸಮಾವೇಶದಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ತಿಪಟೂರಿನ ಮಾಜಿ ಶಾಸಕ ಕೆ.ಷಡಕ್ಷರಿ ಅವರ ಕುರಿತು ಸ್ವಾರಸ್ಯಕರ ಕತೆ ಹೇಳಿ ಸಹಸ್ರಾರು ಕಾರ್ಯಕರ್ತರ ಗಮನ ಸೆಳೆದ ಪ್ರಸಂಗ ನಡೆಯಿತು.
ತುಮಕೂರಿನ ಅಮಾನಿಕೆರೆ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಸಮಾರಂಭದಲ್ಲಿ ರಾಜಣ್ಣ, ನಾನು ಮಾಜಿ ಶಾಸಕ ಷಡಕ್ಷರಿ ಕತೆ ಹೇಳುತ್ತೇನೆ ಕೇಳಿ ಅಂದರು. ಕಳೆದ ವಿಧಾನಸಭಾ ಚುನಾವಣಾ ಪ್ರಚಾರ ಸಮಯದಲ್ಲಿ ಯಡಿಯೂರಪ್ಪ ರಾತ್ರೋ ರಾತ್ರಿ ತಿಪಟೂರಿಗೆ ಬಂದರು. ನಾನು ಮುಖ್ಯಮಂತ್ರಿ ಆಗಬೇಕು ಅಂದರೆ, ಈ ಹುಡುಗನನ್ನು ಗೆಲ್ಲಿಸಬೇಕು ಅಂತಾ ಹೇಳಿದರು.
ತಿಪಟೂರು ತಾಲ್ಲೂಕಿನಲ್ಲಿ ಬಹಳಷ್ಟು ಜನ ವೀರಶೈವ ಲಿಂಗಾಯತ ಮತಗಳಿವೆ. ಹಾಗಾಗಿ ತಿಪಟೂರಿಗೆ ಬಂದ ಯಡಿಯೂರಪ್ಪ ಷಡಕ್ಷರಿಗೆ ವೋಟ್ ಹಾಕಿದರೆ ಒಬ್ಬ ಲಿಂಗಾಯತ ಎಂಎಲ್ಎ ಆಗುತ್ತಾರೆ. ಅದೇ ನಾಗೇಶ್ ಗೆ ವೋಟು ಹಾಕಿದರೆ ನಮ್ಮ ಸಮುದಾಯದವ್ರು ಮುಖ್ಯಮಂತ್ರಿ ಆಗುತ್ತಾರೆ. ಆದ್ದರಿಂದ ಬಿ.ಸಿ.ನಾಗೇಶ್ ಅವರನ್ನು ಗೆಲ್ಲಿಸಿ ಅಂತಾ ಹೇಳಿದ್ದಕ್ಕೆ ಅವರನ್ನು ಗೆಲ್ಲಿಸಿದರು.
ಚುನಾವಣೆಯಲ್ಲಿ ಗೆದ್ದ ನಂತರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯೂ ಆದರು. ಆದರೆ ಅವಧಿಗೂ ಮೊದಲೇ ಅವರನ್ನು ಕಣ್ಣೀರು ಹಾಕಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದರು. ಹೀಗಾಗಿ ಇನ್ನು ಮುದೆ ಬಿಜೆಪಿಯವರು ಆ ಸಮುದಾಯದ ಬಳಿ ಹೇಗೆ ಮತ ಕೇಳುತ್ತಾರೆ. ಗೊತ್ತಿಲ್ಲ ಎಂದು ತಿಳಿಸಿದರು.
ಮಣ್ಣಿನ ಮಕ್ಕಳ ಹೆಸರು ಹೇಳೋಕೆ ಎಲ್ಲರೂ ಹೆದರಿಕೊಳ್ಳುತ್ತಾರೆ. ಆದರೆ ನಮ್ಮ ಟಿ.ಬಿ.ಜಯಚಂದ್ರ ಅವರು ಹೆದರುವುದಿಲ್ಲ. ಆದರೂ ಅವರು ಅವರ ಹೆಸರು ಎತ್ತಿಲ್ಲ ಎಂದು ಹೇಳಿದರು.